ಶನಿವಾರ, ಅಕ್ಟೋಬರ್ 31, 2020
25 °C

ಪ್ರತಿಭಟನೆ ಎದುರಿಸಿದ ನೋಡಲ್‌ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿದ ಬಳಿಕ ಪಾಲಿಕೆಯ ಸೇವೆಯಲ್ಲಿ ಯಾವುದೇ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿ ವಾರ್ಡ್‌ಗೂ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ನೇಮಕಗೊಂಡ ಮರುದಿನವೇ ನೋಡಲ್‌ ಅಧಿಕಾರಿಯೊಬ್ಬರು ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಿದರು.

ಹೆಬ್ಬಾಳ ಕ್ಷೇತ್ರದ ಜೆ.ಸಿ.ನಗರ ವಾರ್ಡ್‌ನ ನೋಡಲ್‌ ಅಧಿಕಾರಿಯನ್ನಾಗಿ ವಿಶೇಷ ಆಯುಕ್ತ (ಕಲ್ಯಾಣ) ಜಿ.ರವೀಂದ್ರ ಅವರನ್ನು ನೇಮಿಸಲಾಗಿದೆ. ವಾರ್ಡ್‌ಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಅವರು ಬೀದಿ ಬದಿ ವ್ಯಾಪಾರಿಗಳನ್ನು ಹಾಗೂ ಕೆಲವು ಮಳಿಗೆಗಳಿಂದ ಹೊರಚಾಚಿರುವ ಚಾವಣಿಗಳನ್ನು ತೆರವುಗೊಳಿಸುವಂತೆ ವಾರ್ಡ್‌ನ ಅಧಿಕಾರಿಗಳಿಗೆ ಸೂಚಿಸಿದ್ದರು. ಇದಕ್ಕೆ ವರ್ತಕರು ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಿಗೆದ್ದ ರವೀಂದ್ರ ಜೆಸಿಬಿ ತರಿಸಿ ಅವುಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ ಸ್ಥಳೀಯರು ಈ ಬಗ್ಗೆ ಶಾಸಕ ಬೈರತಿ ಸುರೇಶ್‌ಗೆ ದೂರು ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಸುರೇಶ್‌, ‘ನೋಡಲ್‌ ಅಧಿಕಾರಿಗಳನ್ನು ನೇಮಿಸಿರುವುದು ಜನರೊಂದಿಗೆ ಸಮನ್ವಯ ಸಾಧಿಸಲು ಹೊರತು ಜನರ ಜೊತೆ ದರ್ಪದಿಂದ ವರ್ತಿಸುವುದಕ್ಕಲ್ಲ. ಅಂಗವಿಕಲರು, ಬಡವರು ಜೀವನೋಪಾಯಕ್ಕೆ ವ್ಯಾಪಾರ ಮಾಡುತ್ತಿದ್ದಾರೆ. ನೋಡಲ್‌ ಅಧಿಕಾರಿಯಾಗಿ ಮಾಡಬೇಕಾದ ಬೇರೆ ಕೆಲಸ ಬಹಳಷ್ಟಿದೆ. ಮೊದಲು ಅವುಗಳನ್ನು ಮಾಡಿ’ ಎಂದು ನೋಡಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

‘ಒಂದು ವೇಳೆ ಮಳಿಗೆಗಳನ್ನು ತೆರವುಗೊಳಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ನೀವೇ ಹೊಣೆ’ ಎಂದು ಎಚ್ಚರಿಸಿದ್ದರು. ಬಳಿಕ ರವೀಂದ್ರ ಅಲ್ಲಿಂದ ನಿರ್ಗಮಿಸಿದ್ದರು.

‘ಬೀದಿ ಬದಿ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸದೆ ಅವರನ್ನು ತೆರವುಗೊಳಿಸುವಂತಿಲ್ಲ. ಮೊದಲೇ ಕೊರೊನಾದಿಂದ ಜೀವನೋಪಾಯಕ್ಕೂ ಕಷ್ಟಪಡುವ ಸ್ಥಿತಿಯಲ್ಲಿ ಬೀದಿಬದಿ ವ್ಯಾಪಾರಿಗಳಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯತೆಯೂ ಮುಖ್ಯ’ ಎಂದು ಕಾಂಗ್ರೆಸ್‌ ಮುಖಂಡ ಅಬ್ದುಲ್‌ ವಾಜಿದ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.