ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಾಂಗ ನಾಯಕತ್ವ ತ್ಯಜಿಸಲು ಸಿದ್ಧ: ಕುಮಾರಸ್ವಾಮಿ

ಅಸಮಾಧಾನವಿದ್ದರೆ ಹೊಸ ನಾಯಕನ ಹುಡುಕಿಕೊಳ್ಳಲಿ
Last Updated 17 ಅಕ್ಟೋಬರ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿರಿಯ ನಾಯಕ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ನಾಯಕರಿಗೆ ನನ್ನ ನಾಯಕತ್ವದಲ್ಲಿ ವಿಶ್ವಾಸ ಇಲ್ಲ‌ದಿದ್ದರೆ ನಾನು ಶಾಸಕಾಂಗ ನಾಯಕತ್ವ ತ್ಯಜಿಸಲು ಸಿದ್ಧ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

‘ಅಸಮಾಧಾನವಿದ್ದರೆ ದೇವೇಗೌಡರ ಜತೆ ಮಾತನಾಡಿಕೊಂಡು ಹೊಸ ನಾಯಕತ್ವ ಹುಡುಕಿಕೊಳ್ಳಲಿ. ಅದಕ್ಕೆ‌ ನನ್ನ ಯಾವುದೇ ವಿರೋಧ ಇಲ್ಲ. ಎಲ್ಲರ ಜೊತೆ ನಾನು ಗೌರವಯುತವಾಗಿ ನಡೆದುಕೊಂಡಿದ್ದೇನೆ. ಯಾರಿಂದಲೂ ಆ ವಿಚಾರವಾಗಿ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ’ ಎಂದು ಅವರು ಗುರುವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ನಾನು ಘೋಷಿಸಿದ ರೈತರ ಸಾಲ ಮನ್ನಾಕ್ಕೆಯಡಿಯೂರಪ್ಪ ಅವರು ಹೊಸ ಹಣ ಸಂಗ್ರಹ ಮಾಡುವುದು ಬೇಡ. ವೈಜ್ಞಾನಿಕವಾಗಿ ನಾನು ಸಾಲಮನ್ನಾಗೆ ಹಣ ಇಟ್ಟಿದ್ದೇನೆ. ಆ ಹಣ ಬಿಡುಗಡೆ ಮಾಡಿದರೆ ಸಾಕಾಗುತ್ತದೆ’ ಎಂದರು.

‘ನೆರೆಗೂ ಸಾಲಮನ್ನಾ ಹಣಕ್ಕೂ ಹೊಂದಾಣಿಕೆ ಮಾಡುವುದು ಬೇಡ, ಯಡಿಯೂರಪ್ಪ ಅವರು ಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಅವರು ತೀರ್ಮಾನ ಮಾಡಬೇಕು, ಸಾಲ ಮನ್ನಾ ವಿಚಾರದಲ್ಲಿ ನಾನು ಕೊಟ್ಟ ಮಾತನ್ನು ಉಳಿಸಿದ್ದೇನೆ’ ಎಂದು ಹೇಳಿದರು.

‘ಅನರ್ಹ ಶಾಸಕರನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಶಾಸಕ ಕೆ.ಗೋಪಾಲಯ್ಯ ಎರಡು ಬಾರಿ ನಮಗೆ ಮೋಸ ಮಾಡಿದ್ದಾರೆ. ಅವರು ನಮಗೆ ಟೋಪಿ ಹಾಕಿದ್ದಾರೆ. ದೇವೇಗೌಡರ ಹತ್ತಿರ ಬೇಡಿಕೊಂಡು ಮತ್ತೆ ಪಕ್ಷಕ್ಕೆ ವಾಪಸ್ ಆದರು, ಮತ್ತೆ ಅವರೇ ನಮಗೆ ದ್ರೋಹ ಮಾಡಿದರು. ಮತ್ತೆ ಅವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಆಣೆ ಪ್ರಮಾಣ ಅಗತ್ಯವಿರಲಿಲ್ಲ

‘ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಗುರುವಾರ ಆಣೆ ಪ್ರಮಾಣ ಪ್ರಸಂಗ ನಡೆಯುವ ಅಗತ್ಯ ಇರಲಿಲ್ಲ. ವಿಶ್ವನಾಥ್ ಖರೀದಿ ಬಗ್ಗೆ ಜನಸಾಮಾನ್ಯರಿಗೂ ಗೊತ್ತಿದೆ. ಯಾವ ವ್ಯಕ್ತಿ ನಿಮ್ಮನ್ನು ಎಳೆದಿದ್ದಾರೆ ಅವರ ಬಗ್ಗೆ ನೀವು ಚರ್ಚೆ ಮಾಡುವ ಅಗತ್ಯತೆ ಇಲ್ಲವೆಂದು ಸಾ.ರಾ.ಮಹೇಶ್ ಅವರಿಗೆ ನಾನು ಮನವಿ ಮಾಡುತ್ತೇನೆ. ಮುಂದಿನ ತೀರ್ಮಾನವನ್ನು ಹುಣಸೂರಿನ ಜನರು ಮಾಡುತ್ತಾರೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಈ ಹಿಂದೆ ಧರ್ಮಸ್ಥಳದಲ್ಲಿ ನಾನು ಆಣೆ ಮಾಡಿದ್ದೇನೆ. ಸತ್ಯ ಇರುವುದರ ಬಗ್ಗೆ ನಾನು ಆಣೆ ಮಾಡಿದ್ದೆ. ಯಡಿಯೂರಪ್ಪ ಅವರೂ ಅಲ್ಲಿಗೆ ಬಂದಿದ್ದರು. ಆದರೆ ಅವರು ದೇವರಿಗೆ ನಮಸ್ಕರಿಸಿ ಹೊರಟು ಹೋದರು. ಅದಾದ ನಂತರ ಯಡಿಯೂರಪ್ಪ ಅಧಿಕಾರ ಬಿಡಬೇಕಾದ ಸಂದರ್ಭ ಬಂತು. ಅವರು ದೇಶದ ಸಂವಿಧಾನದ ಅಡಿಯಲ್ಲಿರಕ್ಷಣೆ ಪಡೆದುಕೊಂಡರು. ಆದರೆ, ಅವರು ದೇವರಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಆಗಿಲ್ಲ’ ಎಂದರು.

‘ನಾನು ಮತ್ತು ಸಾ.ರಾ. ಮಹೇಶ್ ಸ್ವಂತ ಅಣ್ಣತಮ್ಮಂದಿರ ರೀತಿ ಇದ್ದೇವೆ. ಅವರ ಸ್ವಭಾವದ ಬಗ್ಗೆ ನನಗೆ ಗೊತ್ತಿದೆ. ಅವರು ಕೊಟ್ಟಿರುವ ರಾಜೀನಾಮೆಯನ್ನು ವಾಪಸ್‌ಪಡೆಯುತ್ತಾರೆ. ಸ್ಪೀಕರ್ ಅವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಅವರು ರಾಜೀನಾಮೆಯನ್ನು ವಾಪಸ್ ಪಡೆಯುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT