ಸೋಮವಾರ, ಡಿಸೆಂಬರ್ 9, 2019
17 °C
ಉದ್ಯೋಗ ಆಮಿಷ: ಹಣ ವಂಚಿಸಿದ ಆರೋಪ‍

ಜೆಡಿಎಸ್‌ ಮುಖಂಡ ಧನರಾಜ್‌ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಬಕಾರಿ ಇಲಾಖೆ ಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಜೆಡಿಎಸ್ ಮುಖಂಡ ಧನರಾಜ್ ಎಂಬಾತನನ್ನು ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದಾರೆ. 

ಕರ್ನಾಟಕ ಲೋಕಸೇವಾ ಆಯೋಗ ದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶ್ಯಾಂ ಭಟ್ ಈ ಪ್ರಕರಣದಲ್ಲಿ ಮೂರನೇ ಆರೋಪಿ. ‘ನನ್ನ ಮಗನಿಗೆ ಸಬ್‌ಇನ್‌ಸ್ಪೆಕ್ಟರ್‌ ಕೆಲಸ ಕೊಡಿಸುವುದಾಗಿ ಹೇಳಿದ್ದ ನಿವೃತ್ತ ಎಆರ್‌ಎಸ್‌ಐ ಪ್ರದೀಪ್, ಜೆಡಿಎಸ್ ಮುಖಂಡ ಧನರಾಜ್ ಹಾಗೂ ಶ್ಯಾಂ ಭಟ್‌ ಅವರು ಹಣ ಪಡೆದು ವಂಚಿಸಿದ್ದಾರೆ’ ಎಂದು ಸಶಸ್ತ್ರ ಮೀಸಲು ಪಡೆಯ ನಿವೃತ್ತ ಆರ್‌ಎಸ್‌ಐ ಸಿದ್ದಯ್ಯ ಮೇ 12ರಂದು ದೂರು ನೀಡಿದ್ದಾರೆ. 

ದೂರಿನ ವಿವರ: ‘ಮೈಸೂರು ರಸ್ತೆಯಲ್ಲಿರುವ ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡಿದ್ದ ಸಿದ್ದಯ್ಯ ಹಾಗೂ ಪ್ರದೀಪ್, ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ‘ನಿನ್ನ ಮಗನಿಗೆ ಅಬಕಾರಿ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುತ್ತೇನೆ’ ಎಂದು ಸಿದ್ದಯ್ಯ ಅವರಿಗೆ ಪ್ರದೀಪ್ ಭರವಸೆ ನೀಡಿದ್ದರು. ಆನಂತರ ಧನರಾಜ್‌ ಅವರನ್ನು 2017ರಲ್ಲಿ ಪರಿಚಯ ಮಾಡಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್ ನನ್ನ ಸ್ನೇಹಿತರು. ನೀವು ₹ 20 ಲಕ್ಷ ಕೊಟ್ಟರೆ, ಶ್ಯಾಂ ಭಟ್ ಅವರನ್ನೇ ನೇರವಾಗಿ ಭೇಟಿ ಮಾಡಿಸಿ ಹುದ್ದೆ ಕೊಡಿಸುತ್ತೇನೆ’ ಎಂದು ಧನರಾಜ್‌ ಭರವಸೆ ನೀಡಿದ್ದರು. ಅವರ ಮಾತು ನಂಬಿದ್ದ ಸಿದ್ದಯ್ಯ, ಮುಂಗಡ ವಾಗಿ ₹ 10 ಲಕ್ಷ ಕೊಟ್ಟಿದ್ದರು. ಆ ಹಣ ವನ್ನು ಶ್ಯಾಂ ಭಟ್‌ಗೆ ತಲುಪಿಸಿರುವುದಾಗಿ ಆರೋಪಿ ಹೇಳಿದ್ದರು’ ದೂರಿನಲ್ಲಿ ತಿಳಿಸಿ ದ್ದಾರೆ. ‘ಮೊದಲ ನೇಮಕಾತಿ ಪಟ್ಟಿಯಲ್ಲಿ ಸಿದ್ದಯ್ಯ ಅವರ ಮಗನ ಹೆಸರು ಬಂದಿರಲಿಲ್ಲ. ಆ ಬಗ್ಗೆ ಧನರಾಜ್‌ ಅವರನ್ನು ಕೇಳಿದಾಗ, ಎರಡನೇ ಪಟ್ಟಿಯಲ್ಲಿ ಹೆಸರು ಬರುವುದಾಗಿ ಶ್ಯಾಂ ಭಟ್‌ ತಿಳಿಸಿದ್ದಾರೆ’ ಎಂದಿದ್ದರು. ಆದರೆ, ಆ ಪಟ್ಟಿಯಲ್ಲೂ ಹೆಸರು ಬಂದಿರಲಿಲ್ಲ.’

‘ವಂಚನೆಗೆ ಒಳಗಾಗಿರುವುದು ಗೊತ್ತಾಗಿ, ಹಣ ವಾಪಸು ಕೊಡುವಂತೆ ಸಿದ್ದಯ್ಯ ಒತ್ತಾಯಿಸಿದ್ದರು. ಆಗ ಆರೋಪಿಗಳು, ₹ 3 ಲಕ್ಷ ಮಾತ್ರ ವಾಪಸು ನೀಡಿದ್ದರು. ಉಳಿದ ₹ 7 ಲಕ್ಷವನ್ನು ಇದುವರೆಗೂ ಕೊಟ್ಟಿಲ್ಲ. ಪ್ರದೀಪ್, ಧನರಾಜ್ ಹಾಗೂ ಶ್ಯಾಂ ಭಟ್‌ ಮೂವರೂ ಸೇರಿಕೊಂಡು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆಗೆ ಶ್ಯಾಂ ಭಟ್‌ ಸಂಪರ್ಕಕ್ಕೆ ಸಿಗಲಿಲ್ಲ. ಪ್ರಕರಣದಲ್ಲಿ ಅವರ ಪಾತ್ರ ಇದ್ದಂತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಾಸಕರ ಲೆಟರ್‍ಹೆಡ್ ಫೋರ್ಜರಿ: ಇಬ್ಬರ ಬಂಧನ

ಬೆಂಗಳೂರು: ಮಾಯಕೊಂಡ ಕ್ಷೇತ್ರದ ಬಿಜೆಪಿ ಶಾಸಕ ಎನ್. ಲಿಂಗಣ್ಣ ಅವರ ಲೆಟರ್‍ಹೆಡ್ ಮತ್ತು ಸಹಿ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸೌಧ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ದಾವಣಗೆರೆಯ ತಿಪ್ಪೇಸ್ವಾಮಿ (25) ಮತ್ತು ತಿರುಮಲೇಶ್ (50) ಬಂಧಿತರು. ಲಿಂಗಣ್ಣ ಅವರ ಸಹಿ ಇರುವ ಲೆಟರ್‍ಹೆಡ್‍ಗಳನ್ನು ದಾವಣಗೆರೆ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಬಂಜಾರ ಅಭಿವೃದ್ಧಿ ನಿಗಮಕ್ಕೆ ಫಲಾನುಭವಿಗಳಿಗೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಆಪ್ತರು, ಶಾಸಕರ ಗಮನಕ್ಕೆ ತಂದಿದ್ದರು. ಅದನ್ನು ಪರಿಶೀಲಿಸಿದಾಗ ಫೋರ್ಜರಿ ಮಾಡಿರುವುದು ಗೊತ್ತಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣೆಗೆ ಶಾಸಕರು ದೂರು ನೀಡಿದ್ದರು.

ವಿವಿಧ ಯೋಜನೆಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಬಂಜಾರ ನಿಗಮ ಸಾಲ ನೀಡುತ್ತದೆ. ಸಾಲ ಮಂಜೂರಾತಿಗೆ ಸ್ಥಳೀಯ ಶಾಸಕರು ಶಿಫಾರಸು ಮಾಡಬೇಕು. ಶಾಸಕ ಲಿಂಗಣ್ಣ ಅವರು ಈ ಹಿಂದೆ ‌ಫಲಾನುಭವಿಯೊಬ್ಬರಿಗೆ ನೀಡಿದ್ದ ಲೆಟರ್‍ಹೆಡ್ ಅನ್ನು ಆರೋಪಿಗಳು ಫೋರ್ಜರಿ ಮಾಡಿದ್ದರು. ಅರ್ಜಿ ಜತೆಗೆ ಸಲ್ಲಿಸುತ್ತಿದ್ದ ಲೆಟರ್‍ಹೆಡ್ ಅನ್ನು ಶಾಸಕರ ಅಸಲಿ ಶಿಫಾರಸು ಪತ್ರ ಎಂದು ತಿಳಿದು ನಿಗಮದ ಅಧಿಕಾರಿಗಳು ಸಾಲ ಮಂಜೂರು ಮಾಡುತ್ತಿದ್ದರು. ಆ ಮೂಲಕ, ಆರೋಪಿಗಳು ಜನರಿಂದ ಭಾರಿ ಮೊತ್ತ ಪಡೆಯುತ್ತಿದ್ದುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು