ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್: ಎಚ್.ಡಿ. ದೇವೇಗೌಡ ಘೋಷಣೆ

Last Updated 2 ಸೆಪ್ಟೆಂಬರ್ 2021, 16:52 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಗರದ 28 ಕ್ಷೇತ್ರಗಳ ಪೈಕಿ 9 ಕಡೆ ಮಹಿಳೆಯರಿಗೆ ಟಿಕೆಟ್ ನೀಡಲಾಗುವುದು ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ತಿಳಿಸಿದರು.

ಜೆಡಿಎಸ್ ಬೆಂಗಳೂರು ಮಹಾನಗರ ಘಟಕ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ ಅಭ್ಯರ್ಥಿಗಳು ಎಷ್ಟು ಮತ ಪಡೆಯುತ್ತಾರೆ ಎಂಬುದು ಮುಖ್ಯವಲ್ಲ. ಸೋತರೂ ಮುಂದಿನ ಚುನಾವಣೆ ವೇಳೆಗೆ ಅವರು ನಾಯಕತ್ವ ಬೆಳೆಸಿಕೊಳ್ಳುತ್ತಾರೆ’ ಎಂದರು.

‘ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಹಿಂಜರಿಯಬಾರದು. ಹಣವಿಲ್ಲ ಎಂಬ ಹಿಂಜರಿಕೆ ಬೇಡ. ವಿಧಾನಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರಬೇಕು. ಪಕ್ಷದ ಟಿಕೆಟ್ ಕೊಡಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡಿ ಬಳಿಕವೇ ನಾನು ಮುಖ್ಯಮಂತ್ರಿಯಾದೆ. ಬಳಿಕ ಸ್ಥಳೀಯ ಸಂಸ್ಥೆಗಳಲ್ಲಿ ಶೇ 33ರಷ್ಟು ಮೀಸಲಾತಿ ನೀಡುವ ನಿರ್ಧಾರ ಕೈಗೊಂಡೆ. ಬಿಬಿಎಂಪಿ ಚುನಾವಣೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡುತ್ತೇವೆ’ ಎಂದು ತಿಳಿಸಿದರು.

ಅನಿತಾ ಗೈರು: ಜೆಡಿಎಸ್‌ನಿಂದ ಆಯ್ಕೆಯಾಗಿರುವ ಏಕೈಕ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಹಿಳಾ ಸಮಾವೇಶಕ್ಕೆ ಗೈರಾಗಿದ್ದರು.

ಅನಿತಾ ಕುಮಾರಸ್ವಾಮಿ ಬರುವ ನಿರೀಕ್ಷೆಯಲ್ಲಿ ಕಾರ್ಯಕರ್ತೆಯರು ಕಾದಿದ್ದರು. ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ದೇವೇಗೌಡರು 1 ಗಂಟೆಗೆ ಬಂದರು. ಬಳಿಕ ಸಮಾವೇಶಕ್ಕೆ ಚಾಲನೆ ದೊರೆಯಿತು. ಅನಿತಾ ಅವರು ಬರಲಿಲ್ಲ.

ಕೋವಿಡ್ ಮೂರನೇ ಅಲೆ ಆತಂಕದ ನಡುವೆಯೂ ಅಂತರ ಕಾಪಾಡಿಕೊಳ್ಳದೆ ಸಮಾವೇಶದಲ್ಲಿ ಜನ ಭಾಗವಹಿಸಿದ್ದರು. ಮಾಸ್ಕ್ ತೆಗೆದು ಘೋಷಣೆ ಕೂಗುವಂತೆ ಕಾರ್ಯಕರ್ತೆಯೊಬ್ಬರು ಘೋಷಣೆ ಮಾಡಿದರು. ಆದರೆ, ಆಯೋಜಕರು ಸಮಜಾಯಿಷಿ ನೀಡಿ, ‘ಯಾರೂ ಮಾಸ್ಕ್ ತೆಗೆಯಬಾರದು, ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ರಾಜಕೀಯ ಪಕ್ಷಗಳ ಸಮಾವೇಶದಲ್ಲಿ ನಿಯಮ ಉಲ್ಲಂಘನೆ ಆಗಬಾರದು ಎಂದು ಹೈಕೋರ್ಟ್‌ ಪದೇ ಪದೇ ಹೇಳುತ್ತಿದೆ. ಎಲ್ಲರೂ ನಿಯಮ ಪಾಲಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT