ಬೆಂಗಳೂರು: ‘ಜೆಡಿಎಸ್ ಪಕ್ಷ ಬಲ ಕಳೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಪಕ್ಷದ ಸಂಘಟನೆಗೆ ಮತ್ತೆ ಶಕ್ತಿ ತುಂಬಲು ಸೆಪ್ಟೆಂಬರ್ 10ರಂದು ನಗರದ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ತುಳಿಯುತ್ತಿದ್ದಾರೆ. ಈಗ ಪಕ್ಷವನ್ನು ರಕ್ಷಿಸುವುದು ನನ್ನ ಗುರಿ. 91ರ ಇಳಿ ವಯಸ್ಸಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಂತದಲ್ಲಿ ಕಾರ್ಯಕರ್ತರು ನನ್ನ ಕೈ ಬಿಡಬೇಡಿ’ ಎಂದು ಭಾವುಕರಾಗಿ ಮನವಿ ಮಾಡಿದರು.
ಸೆ.10 ರ ಸಮಾವೇಶದಲ್ಲಿ 20,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕರ್ತರು ಸ್ವಂತ ಶಕ್ತಿಯಿಂದ ಬಂದು ಭಾಗವಹಿಸಬೇಕು. ಎಲ್ಲ ಜಿಲ್ಲೆಗಳ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ‘ಕೋರ್ ಸಮಿತಿ’ ರಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಎದುರಿಸಲು ಈ ಸಮಿತಿ ಕಾರ್ಯತಂತ್ರ ರೂಪಿಸಲಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಅವರೇ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ತಿಳಿಸಿದರು.
ಯಾರೂ ಪಕ್ಷ ತೊರೆಯುವುದಿಲ್ಲ:
‘ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನ ರಾಜಕೀಯ ನನಗೆ ಚೆನ್ನಾಗಿ ಗೊತ್ತಿದೆ. ಜೆಡಿಎಸ್‌ನ ಯಾವ ಶಾಸಕರೂ ಪಕ್ಷ ತೊರೆಯುವುದಿಲ್ಲ. ಪಕ್ಷ ಬಿಡಲು ಮುಂದಾಗಿರುವ ನಮ್ಮ ಪಕ್ಷದ ಒಬ್ಬ ಶಾಸಕನ ಹೆಸರು ಹೇಳಿ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಪತ್ರಕರ್ತರನ್ನುದ್ದೇಶಿಸಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.