ಮಂಗಳವಾರ, ಜನವರಿ 25, 2022
28 °C
ಮೆಥೋಡಿಸ್ಟ್ ಚರ್ಚ್ ಸಭಾಪಾಲಕ ಡೇವಿಡ್ ಕ್ರಿಸ್ಟೋಫರ್ ಹೇಳಿಕೆ

ಮಾನವೀಯ ಮೌಲ್ಯ ಪ್ರತಿಪಾದಿಸಿದ ಯೇಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಬೀದರ್: ‘ಯೇಸು ಕ್ರಿಸ್ತರು ದಯೆ, ಕರುಣೆ, ಪ್ರೀತಿ ಸೇರಿದಂತೆ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಸಾರಿದ್ದರು’ ಎಂದು ಮೆಥೋಡಿಸ್ಟ್ ಚರ್ಚ್ ಸಭಾಪಾಲಕ ಡೇವಿಡ್ ಕ್ರಿಸ್ಟೋಫರ್ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಇಲ್ಲಿಯ ಮೈಲೂರು ಕ್ರಾಸ್‍ನಲ್ಲಿ ಇರುವ ಶ್ರೀಕೃಷ್ಣ ದರ್ಶಿನಿ ಉಡುಪಿ ಹೊಟೇಲ್‍ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ರಿಸ್‍ಮಸ್ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಕುಲದ ಒಳಿತಿಗಾಗಿ ಧರೆಗಿಳಿದು ಬಂದಿದ್ದರು. ಹಿಂಸೆ ಸಹಿಸಿಕೊಂಡು ಜಗದ ಸಂಕಷ್ಟ ಪರಿಹರಿಸಿದ್ದರು. ಸ್ವರ್ಗದ ಮಾರ್ಗ ತೋರಿದ್ದರು ಎಂದು ತಿಳಿಸಿದರು.

ಯೇಸು ಕ್ರಿಸ್ತರ ಸಹೋದರತೆ, ಸಹಬಾಳ್ವೆ, ಶಾಂತಿ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.

ನೌಕರರ ಸಂಘವು ಎಲ್ಲ ಜಾತಿ, ಧರ್ಮಗಳ ನೌಕರರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಪಾಸ್ಟರ್ ಬಸವರಾಜ ಮಾತನಾಡಿ, ಯೇಸು ಮನುಕುಲವನ್ನು ಪಾಪದ ಬದುಕಿನಿಂದ ಮುಕ್ತಗೊಳಿಸಿದ್ದರು ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಯೇಸು ಕ್ರಿಸ್ತರ ತತ್ವಗಳನ್ನು ಅನುಸರಿಸಿದ್ದಲ್ಲಿ ಜೀವನದಲ್ಲಿ ಕಷ್ಟಗಳೇ ಇರಲಾರವು ಎಂದು ತಿಳಿಸಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಮಾತನಾಡಿದರು. ನಗರಸಭೆ ಸದಸ್ಯ ಪಿ.ಜೆ. ಜೋಶ್ವಾ, ಮಾಜಿ ಉಪಾಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಉಪಸ್ಥಿತರಿದ್ದರು.

ಹೊಸನ್ನಾ ಭಜನೆ ಮಂಡಳಿ ಸದಸ್ಯರು ಯೇಸು ಕ್ರಿಸ್ತರ ಭಕ್ತಿಗೀತೆಗಳನ್ನು ಹಾಡಿದರು. ರಾಜು ಮಿತ್ರಾ ಸ್ವಾಗತಿಸಿದರು. ಟಿ.ಎಂ. ಮಚ್ಚೆ ನಿರೂಪಿಸಿದರು. ಸಂಜು ಸೂರ್ಯವಂಶಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.