ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಕಾದಿಂದ ಮೆಟ್ರೊಗೆ ₹3,717 ಕೋಟಿ ಸಾಲ

Last Updated 26 ಮಾರ್ಚ್ 2021, 19:26 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಎರಡನೇ ಹಂತದಲ್ಲಿ 72 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಜಪಾನ್‌ನ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ₹3,717 ಕೋಟಿ ಸಾಲ ನೀಡುವುದಾಗಿ ಘೋಷಿಸಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಜೈಕಾ ಮಧ್ಯೆ ಶುಕ್ರವಾರ ಒಪ್ಪಂದ ಏರ್ಪಟ್ಟಿದೆ. ಕೇಂದ್ರ ಹಣಕಾಸು ಇಲಾಖೆ ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಡಾ.ಸಿ.ಎಸ್. ಮಹಾಪಾತ್ರ ಮತ್ತು ಜೈಕಾ ಮುಖ್ಯ ಪ್ರತಿನಿಧಿ ಮಾಟ್ಸುಮೊಟೊ ಕಾಟ್ಸುವೊ ಅವರು ಒಪ್ಪಂದಕ್ಕೆ ಹಾಕಿದ್ದಾರೆ.

ನಮ್ಮ ಮೆಟ್ರೊ ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ (ರೀಚ್-6), ಸಿಲ್ಕ್‌ ಬೋರ್ಡ್- ಕೆ.ಆರ್. ಪುರ (2ಎ) ಹಾಗೂ ಕೆ.ಆರ್. ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ (2ಬಿ) ನಡುವಿನ ಮಾರ್ಗ ನಿರ್ಮಾಣ ಯೋಜನೆಗೆ ಈ ಹಣವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಉದ್ದೇಶಿತ ಈ ಮಾರ್ಗಗಳಲ್ಲಿ ಸಂಚರಿಸುವವರಿಗೆ ಸುಗಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ದೊರೆಯಲಿದೆ. ಸಕಾಲದಲ್ಲಿ ಯೋಜನೆ ಪೂರ್ಣಗೊಂಡರೆ, ಸಂಚಾರದಟ್ಟಣೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ.

ನಗರದಲ್ಲಿ ಖಾಸಗಿ ವಾಹನಗಳ ನೋಂದಣಿ ಗಣನೀಯವಾಗಿ ಏರಿಕೆಯಾಗಿದ್ದು, 2019ರ ಅಂತ್ಯಕ್ಕೆ 80 ಲಕ್ಷ ವಾಹನಗಳು ನೋಂದಣಿಯಾಗಿವೆ. ದೇಶದಲ್ಲಿ ದೆಹಲಿ ನಂತರ ಬೆಂಗಳೂರು ಎರಡನೇ ಅತಿ ಹೆಚ್ಚು ಇಂಗಾಲ ಹೊರಸೂಸುವ ನಗರವಾಗಿದ್ದು, ‘ನಮ್ಮ ಮೆಟ್ರೊ’ ಯೋಜನೆಯಿಂದ ವಾರ್ಷಿಕ 89,952 ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್ ಕಡಿಮೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

‘ನಮ್ಮ ಮೆಟ್ರೊ ಮೊದಲ ಹಂತದಲ್ಲೂ ಅಂದರೆ 2006ರಲ್ಲಿ ಸಾಲದ ರೂಪದಲ್ಲಿ ಜೈಕಾ ಆರ್ಥಿಕ ನೆರವು ನೀಡಿತ್ತು. ಬೆಂಗಳೂರು, ಚೆನ್ನೈ, ಕೋಲ್ಕತ್ತ, ಮುಂಬೈ, ಅಹಮದಾಬಾದ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಮೆಟ್ರೊ ಯೋಜನೆಗಳಿಗೆ ಒಟ್ಟಾರೆ ₹87 ಸಾವಿರ ಕೋಟಿ ಆರ್ಥಿಕ ನೆರವು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT