ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿ– ಮೊಮ್ಮಗಳ ಅನುಮಾನಾಸ್ಪದ ಸಾವು

* ವೃದ್ಧೆ ಮುಖದಲ್ಲಿ ರಕ್ತ ಗಾಯ * ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ
Last Updated 25 ಫೆಬ್ರುವರಿ 2022, 16:15 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಜ್ಜಿ– ಮೊಮ್ಮಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

‘ಸ್ಥಳೀಯ ಮಾರುತಿ ನಗರದ ನಿವಾಸಿ ಜಯಮ್ಮ (70) ಹಾಗೂ ಅವರ ಮೊಮ್ಮಗಳು ಕೊಟ್ಟಿಗೆಪಾಳ್ಯದ ಮಮತಾ (24) ಮೃತರು. ಮನೆಯ ಕೊಠಡಿಯಲ್ಲಿ ಮುಖಕ್ಕೆ ತೀವ್ರ ರಕ್ತ ಗಾಯವಾಗಿರುವ ಸ್ಥಿತಿಯಲ್ಲಿ ಜಯಮ್ಮ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಕೊಠಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಮತಾ ಮೃತದೇಹ ಸಿಕ್ಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮಗಳ ಜೊತೆ ವಾಸವಿದ್ದ ವೃದ್ಧೆ: ‘ಮಗಳು ಹಾಗೂ ಮೊಮ್ಮಗನ ಜೊತೆ ವೃದ್ಧೆ ಜಯಮ್ಮ ಮಾರುತಿನಗರದಲ್ಲಿ ವಾಸವಿದ್ದರು. ಎಂ.ಕಾಂ ಪದವಿ ಮುಗಿಸಿದ್ದ ಮೊಮ್ಮಗಳು ಮಮತಾ ಅವರನ್ನು ಕೊಟ್ಟಿಗೆಪಾಳ್ಯದ ಯುವಕನ ಜೊತೆ ಮದುವೆ ಮಾಡಿಕೊಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಮತಾ ಅವರಿಗೆ ಜನಿಸಿದ್ದ ಮಗು, ಎರಡು ತಿಂಗಳ ಹಿಂದಷ್ಟೇ ತೀರಿಕೊಂಡಿತ್ತು. ಅದರಿಂದ ಮಮತಾ ಮಾನಸಿಕವಾಗಿ ನೊಂದಿದ್ದರು. ಅಜ್ಜಿ ಮನೆಗೆ ಆಗಾಗ ಬಂದು ಹೋಗುತ್ತಿದ್ದರು’ ಎಂದೂ ತಿಳಿಸಿವೆ.

ಗೋಡೆ ಮೇಲೂ ರಕ್ತ: ‘ಮಗಳು ಹಾಗೂ ಮೊಮ್ಮಗ, ಗುರುವಾರ ಸಂಬಂಧಿಕರೊಬ್ಬರ ಮದುವೆಗೆಂದು ಮಂಡ್ಯಕ್ಕೆ ಹೋಗಿದ್ದರು. ಅಜ್ಜಿ ಜಯಮ್ಮ ಮಾತ್ರ ಮನೆಯಲ್ಲಿದ್ದರು. ಅದೇ ಮನೆಗೆ ಕೊಟ್ಟಿಗೆಪಾಳ್ಯದಿಂದ ಮಮತಾ ಸಹ ಮಧ್ಯಾಹ್ನ ಬಂದಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೆಳಿಕೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಪತ್ನಿ ಮಮತಾ ಮನೆಗೆ ವಾಪಸು ಬಾರದಿದ್ದರಿಂದ ಅನುಮಾನಗೊಂಡಿದ್ದ ಪತಿ, ಕೊಟ್ಟಿಗೆಪಾಳ್ಯದಿಂದ ಮಾರುತಿನಗರದ ಮನೆಗೆ ಹೋಗಿದ್ದರು. ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯಲ್ಲಿ ನೋಡಿದಾಗ ಮೃತದೇಹಗಳು ಕಂಡಿದ್ದವು. ಬಳಿಕವೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿವೆ.

‘ವೃದ್ಧೆಯ ಮುಖದ ಮೇಲೆ ಗಾಯವಾಗಿ, ರಕ್ತ ಹೆಪ್ಪುಗಟ್ಟಿತ್ತು. ಮನೆಯ ಗೋಡೆ ಹಾಗೂ ಕೆಲ ಸಾಮಗ್ರಿಗಳ ಮೇಲೂ ರಕ್ತದ ಕಲೆ ಇದೆ. ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಮಮತಾ ಅವರ ಕೈಗೂ ರಕ್ತ ಅಂಟಿಕೊಂಡಿದೆ. ಎರಡೂ ಸಾವುಗಳಿಗೆ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಿದೆ. ಪತಿ ಹಾಗೂ ಕುಟುಂಬಸ್ಥರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲ ಆಯಾಮದಲ್ಲೂ ತನಿಖೆ ಮುಂದುವರಿದಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT