ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ತಡೆಗೆ ಕೈಜೋಡಿಸಿ: ಪ್ರಿಯಾಂಕ ಮೇರಿ ಫ್ರಾನ್ಸಿಸ್‌

ಸದ್ಯದಲ್ಲೇ ‘ಸುರಕ್ಷಣಿ’ ವೆಬ್‌ ಪೋರ್ಟಲ್‌ ಬಿಡುಗಡೆ
Last Updated 8 ಜೂನ್ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಲ್ಯ ವಿವಾಹದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸ್ವಸಹಾಯ ಸಂಘ ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಕರೆ ನೀಡಿದರು.

ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಬುಧವಾರ ನಡೆದ ‘ಬಾಲ್ಯವಿವಾಹಗಳ ತಡೆ: ನಾಗರಿಕ ಸಂಸ್ಥೆಗಳ ಪಾತ್ರ’ ಎಂಬ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.ರಾಷ್ಟ್ರೀಯ ಆರೋಗ್ಯ ಸಮೀಕ್ಷೆಪ್ರಕಾರ ರಾಜ್ಯದಲ್ಲಿ ಶೇ 21.4ರಷ್ಟು ಮಂದಿ ಬಾಲ್ಯ ವಿವಾಹಕ್ಕೆ ಒಳಪಟ್ಟಿದ್ದಾರೆ. ಇದು ಪರೋಕ್ಷವಾಗಿ ರಾಜ್ಯದ ಬೆಳವಣಿಯನ್ನು ಕುಂಠಿತಗೊಳಿಸುತ್ತದೆ’ ಎಂದು ತಿಳಿಸಿದರು.

‘ಅಪ್ರಾಪ್ತ ವಯಸ್ಸಿಗೆ ವಿವಾಹವಾದರೆ ಗರ್ಭಿಣಿಯಾದಾಗ ರಕ್ತಹೀನತೆ, ಶಿಶು ಮರಣ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಬಾಲ್ಯ ವಿವಾಹ ಅಪರಾಧವಾಗಿದ್ದು, ಗ್ರಾಮೀಣ ಭಾಗದಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

‘ನಮ್ಮ ಇಲಾಖೆ ಡಿಡಿಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆದು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಎಲ್ಲರಿಗೂ ಸರಿಯಾದ ತರಬೇತಿಯ ಅಗತ್ಯವಿದೆ’ ಎಂದರು.

ಸದ್ಯದಲ್ಲೇ ಇಲಾಖೆಯಿಂದ ಸುರಕ್ಷಣಿ ಎಂಬ ವೆಬ್‌ ಪೋರ್ಟಲ್‌ ಬಿಡುಗಡೆಗೊಳಿಸುತ್ತಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಬಾಲ್ಯ ವಿವಾಹ ತಡೆದರೆ ಮತ್ತು ನಡೆದರೆ ಆ ಕುರಿತು ನಿಖರ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧಕಾಯ್ದೆ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆ ಕಾಯ್ದೆ ಕುರಿತು ಮಾಹಿತಿ ನೀಡಿ ಕಾನೂನು ಅರಿವಿನ ಬಗ್ಗೆ ಜ್ಞಾನ ಮೂಡಿಸಬೇಕು' ಎಂದರು.

ರಾಘವೇಂದ್ರ ಎಚ್.ಸಿ, ಸರಸ್ವತಿ, ಎಜಿಕಲ್ ಕಲವಳ್ಳಿ, ಚಿತ್ರಾ ಅಂಚನ್, ಮಂಜುಳಾ.ವಿ, ವಾಸುದೇವ ಶರ್ಮ.ಎನ್.ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT