ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಕರ್ತೆ ನಾಗಮಣಿ ಎಸ್‌.ರಾವ್‌ ದತ್ತಿನಿಧಿ ಪ್ರಶಸ್ತಿ ಪ್ರದಾನ

ಗಂಡುಪಾಳ್ಯದಲ್ಲಿ ಕೆಲಸ ಮಾಡಿದ ಸಾಧಕಿ ಸೀತಾದೇವಿ:
Published : 11 ಆಗಸ್ಟ್ 2024, 14:05 IST
Last Updated : 11 ಆಗಸ್ಟ್ 2024, 14:05 IST
ಫಾಲೋ ಮಾಡಿ
Comments

ಬೆಂಗಳೂರು: ಈಗ ಎಲ್ಲ ಮಾಧ್ಯಮ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದೆ 40–50 ಗಂಡುಮಕ್ಕಳ ನಡುವೆ ಒಬ್ಬೊಬ್ಬರೇ ಹೆಣ್ಣುಮಕ್ಕಳು ಕೆಲಸ ಮಾಡಬೇಕಿತ್ತು. ಅಂಥ ಗಂಡುಪಾಳ್ಯದಲ್ಲಿ ಕೆಲಸ ಮಾಡಿ ಜಯಿಸಿದವರಲ್ಲಿ ಎಚ್‌.ಎಲ್‌. ಸೀತಾದೇವಿ ಒಬ್ಬರು ಎಂದು ಪತ್ರಕರ್ತೆ ಸಿ.ಜಿ. ಮಂಜುಳಾ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಹಮ್ಮಿಕೊಂಡಿದ್ದ ನಾಗಮಣಿ ಎಸ್‌.ರಾವ್‌ ದತ್ತಿನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೃಜನಶೀಲತೆ ಎನ್ನುವುದು ನಿರಂತರವಾದುದು. ಸ್ತ್ರೀ ಸಂವೇದನೆ, ಮುರಿದು ಕಟ್ಟುವ ಕೆಲಸಗಳೂ ಮುಂದುವರಿಯುತ್ತವೆ. ಮಾಧ್ಯಮಗಳಲ್ಲಿ ಸೃಜನೇತರ ಸಾಹಿತ್ಯಗಳಾದ ಪ್ರವಾಸ ಕಥನ, ನುಡಿಚಿತ್ರ, ಅನುಭವ ಕಥನ ಸಹಿತ ಎಲ್ಲ ಪ್ರಕಾರಗಳ ವಿಸ್ತರಣೆಯಲ್ಲಿಯೂ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿಶ್ಲೇಷಿಸಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್. ಪುಷ್ಪ ಮಾತನಾಡಿ, ‘ಕುಟುಂಬ, ವೃತ್ತಿ ನಿರ್ವಹಣೆಯೊಂದಿಗೆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಮಹಿಳೆಗೆ ಸವಾಲಿನ ಕೆಲಸ. ಹಾಗಾಗಿಯೇ ಮಹಿಳೆಯರು ವೃತ್ತಿಯಿಂದ ನಿವೃತ್ತರಾದಾಗ ಇನ್ನು ನಮ್ಮಿಷ್ಟದ ಕೆಲಸ ಮಾಡಬಹುದು ಎಂದು ನಿಟ್ಟುಸಿರು ಬಿಡುತ್ತಾರೆ’ ಎಂದು ಹೇಳಿದರು.

ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಮಾತನಾಡಿ, ‘ಪತ್ರಕರ್ತೆಯರ ಸಾಧನೆಯನ್ನು ದಾಖಲು ಮಾಡುವ ಯೋಜನೆ ಸಂಘದ ಮುಂದಿದೆ. ಮುಂದಿನ ಪೀಳಿಗೆಗೆ ಪತ್ರಕರ್ತೆಯರ ಸಾಧನೆಯನ್ನು ತಿಳಿಸುವ ಜವಾಬ್ದಾರಿಯೂ ಸಂಘದ ಮೇಲಿದೆ’ ಎಂದು ಹೇಳಿದರು.

ಪತ್ರಕರ್ತೆ ಮಾಲತಿ ಭಟ್‌ ಅಭಿನಂದನಾ ನುಡಿಗಳನ್ನಾಡಿ, ‘ನಾಗಮಣಿ ಎಸ್‌.ರಾವ್‌ ಅವರು ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದರು. ಎಚ್‌.ಎಲ್‌. ಸೀತಾದೇವಿ ಕೂಡ ಆರಂಭದಲ್ಲಿ ಆಕಾಶವಾಣಿಯಲ್ಲಿ ಕೆಲಸ ಮಾಡಿ ಆನಂತರ ಪತ್ರಿಕಾರಂಗಕ್ಕೆ ಬಂದವರು’ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ‘ಮಾಧ್ಯಮ ಅಥವಾ ಯಾವುದೇ ಕ್ಷೇತ್ರದಲ್ಲಿ ಮಹಿಳೆ ಕೆಲಸ ಮಾಡುವಾಗ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಸಂಘರ್ಷವನ್ನು ಮೀರಿ ನಿಂತಾಗ ಸಾಧನೆ ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಲೇಖಕಿ ಎಚ್‌.ಎಲ್‌. ಸೀತಾದೇವಿ ಪ್ರಶಸ್ತಿ ಸ್ವೀಕರಿಸಿದರು. ಲೇಖಕಿ ನಾಗಮಣಿ ಎಸ್‌. ರಾವ್‌, ಅಬಲಾಶ್ರಮ ಆಡಳಿತ ಮಂಡಳಿ ಸದಸ್ಯ ರಂಗನಾಥ್‌ ಎನ್‌., ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT