ಭಾನುವಾರ, ಆಗಸ್ಟ್ 1, 2021
20 °C

ಸಾಮಾಜಿಕ ಮಾಧ್ಯಮಗಳು ಬೆಂಕಿ–ಬೆಳಕಿದ್ದಂತೆ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಂದು ಎಲ್ಲೆಡೆ ವ್ಯಾಪಿಸಿರುವ ಸಾಮಾಜಿಕ ಮಾಧ್ಯಮಗಳನ್ನು ಬೆಳಕಾಗಿ ಅಥವಾ ಬೆಂಕಿಯಾಗಿಯೂ ಬಳಸಿಕೊಳ್ಳಬಹುದು. ಅದನ್ನು ಹಣತೆಯಾಗಿ ಬಳಸಿದರೆ, ಬೆಳಕು ನೀಡುತ್ತದೆ. ಬೆಂಕಿಯಾಗಿ ಬಳಸಿಕೊಂಡರೆ ಸಮಾಜದ ದಹನವೂ ಆಗುತ್ತದೆ’ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ತಿಳಿಸಿದರು. 

ಜೆಎಸ್ಎಸ್‌ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್‌ ಸಂಸ್ಥೆಯು ಆನ್‌ಲೈನ್ ಮೂಲಕ ಶುಕ್ರವಾರ ಹಮ್ಮಿಕೊಂಡಿದ್ದ ‘ವರ್ವ್‌–2021’ ಸಾಂಸ್ಕೃತಿಕ ಮತ್ತು ತಾಂತ್ರಿಕ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಪೀಳಿಗೆಯವರಿಗೆ ಸಹಸ್ರಾರು ಆಯ್ಕೆಗಳು ಕಣ್ಣ ಮುಂದೆ ಲಭ್ಯ ಇವೆ. ಅಂತರ್ಜಾಲದಲ್ಲಿ ಹುಡುಕಿದ ಕೂಡಲೇ ಮಾಹಿತಿ ಸಿಗುತ್ತದೆ. ಆದರೆ, ಅದೇ ಜ್ಞಾನವಲ್ಲ. ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ದೈಹಿಕ ಹಾಗೂ ಮಾನಸಿಕ ಶಕ್ತಿಗಳ ಶೋಧನೆ ಮುಖ್ಯ. ಹಿಂಜರಿಕೆ, ಕೀಳರಿಮೆ, ಕುಟುಂಬದ ಹಿನ್ನೆಲೆಗಳಿಂದ ಇದರಲ್ಲಿ ಬಹುತೇಕರು ವಿಫಲರಾಗುತ್ತಿದ್ದಾರೆ’ ಎಂದರು.

‘ನಮ್ಮ ಎದುರು ಕೇಕೆ ಹಾಕಿ ಕುಣಿಯುವ, ಸಮಾಜವನ್ನು ನುಂಗಿ ಹಾಕುವ ಹಾಗೂ ವಿಕೃತಿಗಳನ್ನು ಹೊಂದಿರುವಂತಹ ನಕಾರಾತ್ಮಕ ಶಕ್ತಿಗಳು ಅಬ್ಬರಿಸಿಕೊಂಡು ಬರುತ್ತವೆ. ಅವುಗಳ ವಿರುದ್ಧ ಹೋರಾಡಲು ಸಕಾರಾತ್ಮಕ ಶಕ್ತಿ ಬೇಕು. ತರಗತಿಯಿಂದ ಹೊರಬಂದು ಒಂದು ಹಾಡು ಗುನುಗಿದಾಗ, ಹಾಸ್ಯ ಮಾಡಿದಾಗ ನಿಮಗೆ ಸಿಗುವ ಖುಷಿಯಿಂದಲೇ ಸಕಾರಾತ್ಮಕ ಶಕ್ತಿ ಹೊರಹೊಮ್ಮುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್,‘ಅಪರಾಧಗಳಲ್ಲಿ ಭಾಗಿಯಾದ ಬಹುತೇಕ ಆರೋಪಿಗಳಲ್ಲಿ ಒಬ್ಬ ವ್ಯಕ್ತಿಗೆ ಇರಬೇಕಾದ ಮೂಲ ಗುಣಗಳ ಕೊರತೆ ಇರುವುದು ವಿಚಾರಣೆ ವೇಳೆ ತಿಳಿಯುತ್ತದೆ. ಇಂದು ಜ್ಞಾನ ಸಂಪಾದನೆಗೆ ಶಾಲಾ–ಕಾಲೇಜುಗಳಿಗೆ ಹೋಗಲೇಬೇಕೆಂಬ‌ ಅನಿವಾರ್ಯತೆ ಇಲ್ಲ. ವಿಶ್ವದ ಎಲ್ಲ ಮಾಹಿತಿ ನಿಮ್ಮ ಕೈಬೆರಳಿಗೆ ಸಿಗುತ್ತದೆ’ ಎಂದರು.

ಪಿಎಚ್‌.ಡಿ ಪೂರೈಸಿದವರು ಹಾಗೂ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಎಚ್‌.ಆರ್‌.ಮಹದೇವಸ್ವಾಮಿ, ಮೃತ್ಯಂಜಯ ವಿ.ಲಟ್ಟೆ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು