ಗುರುವಾರ , ಅಕ್ಟೋಬರ್ 17, 2019
27 °C
ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿ ನಾರಾಯಣಸ್ವಾಮಿ ಸಲಹೆ

‘ಬಡವರಿಗೆ ನ್ಯಾಯದಾನವೇ ಆದ್ಯತೆಯಾಗಲಿ’

Published:
Updated:
Prajavani

ಬೆಂಗಳೂರು: ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಎಲ್. ನಾರಾಯಣಸ್ವಾಮಿ ಅವರಿಗೆ ವಿವಿಧ ಸಂಘ–ಸಂಸ್ಥೆಗಳಿಂದ ಶನಿವಾರ ಗೌರವ ಅಭಿನಂದನೆ ಸಲ್ಲಿಸಲಾಯಿತು. 

‘ಶ್ರೀಮಂತರಿಗಿಂತ ಬಡವರ ಪ್ರಕರಣಗಳನ್ನು ವಕೀಲರು ತೆಗೆದುಕೊಳ್ಳಬೇಕು. ಶುಲ್ಕವನ್ನು ಭರಿಸಲು ಅಶಕ್ತರಾದವರು ಹೆಚ್ಚು ನಿರೀಕ್ಷೆಯಿಂದ ವಕೀಲರ ಬಳಿ ಬರುತ್ತಾರೆ. ಅವರ ಪ್ರಕರಣಗಳನ್ನು ಕೈಗೆತ್ತಿಕೊಂಡು ನ್ಯಾಯ ನೀಡಬೇಕು’ ಎಂದು ನ್ಯಾ. ಎಲ್. ನಾರಾಯಣಸ್ವಾಮಿ ಸಲಹೆ ನೀಡಿದರು.

‘ವಿಶ್ವವಿದ್ಯಾಲಯಗಳು ನೀಡುವ ಪದವಿಗಳು ನೆಪ ಮಾತ್ರ. ಸಮಾಜದಲ್ಲಿ ವಿವಿಧ ಬಗೆಯ ಜನರೊಂದಿಗೆ ಬೆರೆಯುವ ಅನುಭವವೇ ನಿಜವಾದ ಪದವಿ. ನ್ಯಾಯ ನಿರ್ಣಯ ಮಾಡುವಾಗ ಸಮಾಜದೊಂದಿಗೆ ಬೆರೆತ ಈ ಅನುಭವ ನನ್ನ ಕೈಹಿಡಿದಿದೆ’ ಎಂದರು.

ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ರಾವ್, ‘ಮೀಸಲಾತಿ ವ್ಯವಸ್ಥೆ ಪ್ರತಿಭೆಗೆ ವಿರುದ್ಧವಾದುದು ಎಂಬ ಧೋರಣೆ ಕೆಲವರಲ್ಲಿದೆ. ಗಳಿಸುವ ಅಂಕಗಳು ಆಯಾ ವಿದ್ಯಾರ್ಥಿಗಳು ಹೊಂದಿದ್ದ ಅವಕಾಶಗಳನ್ನು ಅವಲಂಬಿಸಿರುತ್ತದೆ. ವಿದ್ಯಾರ್ಥಿಯ ಸಾಮಾಜಿಕ ಹಿನ್ನೆಲೆ, ಇರುವ ಅವಕಾಶಗಳನ್ನು ಪರಿಗಣಿಸಿ ಮೀಸಲಾತಿ ನೀಡಲಾಗಿರುತ್ತದೆ. ಮೀಸಲಾತಿ ಪ್ರತಿಭೆಗೆ ವಿರುದ್ಧವಾದುದಲ್ಲ’ ಎಂದು ಅಭಿಪ್ರಾಯಪಟ್ಟರು. 

ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ‘ರಾಜ್ಯದಲ್ಲಿ ತ್ವರಿತ ನ್ಯಾಯದಾನಕ್ಕೆ ಶ್ರಮಿಸಿದವರು ನಾರಾಯಣಸ್ವಾಮಿ. ಗುಲ್ಬರ್ಗ ಪೀಠದಲ್ಲಿ 4 ಸಾವಿರ ಪ್ರಕರಣಗಳನ್ನು, ಧಾರವಾಡ ಪೀಠದಲ್ಲಿ 8 ಸಾವಿರ ಪ್ರಕರಣಗಳನ್ನು ಕಡಿಮೆ ಅವಧಿಯಲ್ಲಿ ಇತ್ಯರ್ಥಗೊಳಿಸಿದರು’ ಎಂದರು.

ರಾಜ್ಯ ಹಿಂದುಳಿದ ಆಯೋಗಗಳ ನಿಕಟಪೂರ್ವ ಅಧ್ಯಕ್ಷ ಎಚ್. ಕಾಂತರಾಜ, ‘ನ್ಯಾಯಾಲಯಗಳು ನೀಡುವ ತೀರ್ಪು ಸಾಮಾಜಿಕ ನ್ಯಾಯವನ್ನು ಪ್ರತಿಬಿಂಬಿಸಬೇಕು ಎಂಬ ತತ್ವವಿದೆ. ಈ ತತ್ವಕ್ಕೆ ಬದ್ಧವಾಗಿ ನಾರಾಯಣಸ್ವಾಮಿ ತೀರ್ಪು ನೀಡಿದ್ದಾರೆ’ ಎಂದರು.

Post Comments (+)