ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟಿನಲ್ಲಿ ಸಿಲುಕಿದ್ದ ಮರಿ ನಾಗರ ರಕ್ಷಣೆ

Last Updated 1 ಆಗಸ್ಟ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ಮೊಟ್ಟೆಯಿಂದ ಹೊರ ಬಂದು ತಿಂಗಳು ಕಳೆಯದ ನಾಗರ ಹಾವಿನ ಮರಿ ಅಂಟು ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದು, ‘ಷೇರ್‌ ಹ್ಯಾಬಿಟ್ಯಾಟ್‌’ ಬಳಗದ ಸ್ವಯಂಸೇವಕರು ಮರಿಯನ್ನು ರಕ್ಷಿಸಿದ್ದಾರೆ.

ಹುಳಿಮಾವುವಿನ ಮನೆಯೊಂದ ರಲ್ಲಿ ಕೆಲ ದಿನಗಳ ಹಿಂದೆ ಹಾವಿನ ಮರಿ ಕಾಣಿಸಿಕೊಂಡಿತ್ತು. ಅದನ್ನು ಹಿಡಿಯಲು ಮನೆಯವರು ಷೇರ್‌ ಹ್ಯಾಬಿಟ್ಯಾಟ್‌ನ ಎನ್‌.ಎನ್‌. ಸೋಮು ಅವರಿಗೆ ಕರೆ ಮಾಡಿದ್ದರು.

‘ನಾನು ಮನೆಗೆ ತಲುಪುವಷ್ಟರಲ್ಲಿ ಬಾಗಿಲ ಹೊಸ್ತಿಲ ಸಂಧಿಯಲ್ಲಿ ನುಸುಳಿತ್ತು. ಮತ್ತೆ ಕಾಣಿಸಿಕೊಂಡರೆ ಕರೆ ಮಾಡಲು ತಿಳಿಸಿ ಹೇಳಿ ಮರಳಿದ್ದೆವು’ ಎಂದು ಸೋಮು ತಿಳಿಸಿದರು.

ತಳ ಮಹಡಿಯು ಖಾಲಿ ಇದ್ದು, ರಾತ್ರಿ ಮಲಗುವುದಕ್ಕಷ್ಟೇ ಬಳಸುತ್ತಿದ್ದರು. ರಾತ್ರಿ ಹಾವು ಹರಿದಾಡಬಹುದು ಎಂಬ ಆತಂಕದಿಂದ ಇಲಿ ಹಿಡಿಯಲು ಬಳಸುವ ಅಂಟುಜಾಲವನ್ನು ಇಟ್ಟಿದ್ದರು.

‘ಸೋಮವಾರ ಬೆಳಿಗ್ಗೆ ಕಸ ಗುಡಿಸಲು ಬಂದಾಗ ಹಾವಿನ ಮರಿ ಅಂಟಿನಲ್ಲಿ ಸಿಲುಕಿತ್ತು.ಅಂಟಿನ ಸಮೇತ ಮರಿಯನ್ನು ದೂರದ ಸ್ಮಶಾನದ ಬಳಿ ಎಸೆದಿದ್ದರು. ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ನಾಗರಹಾವು ಸಾಯಿಸಿದರೆ ದೋಷ ತಟ್ಟಲಿದೆ ಎಂದಿದ್ದರು. ಆತಂಕಗೊಂಡ ಮನೆಯವರು ಮರಿಯನ್ನು ಮತ್ತೆ ಮನೆಗೆ ತಂದು, ಬದುಕಿಸಲು ಕೋರಿದ್ದರು’ ಎಂದು ಸೋಮು ಹೇಳಿದರು.

‘ತಾಳೆ ಹಾಗೂ ತೆಂಗಿನ ಎಣ್ಣೆಯನ್ನು ಮರಿಗೆ ಸವರಿ, ಅಂಟು ಪದಾರ್ಥವನ್ನು ತೆಗೆಯಲಾಯಿತು. ನಂತರ ಬಕೆಟ್‌ನಲ್ಲಿ ನೀರು ತುಂಬಿಸಿ ಅದರಲ್ಲಿ ಹಾವಿನ ಮರಿ ಬಿಟ್ಟೆವು. ಅದು ಈಜಲು ಶಕ್ತವಾಗಿದೆ ಎಂದು ಖಾತರಿ ಆಯಿತು. ಸರಾಗವಾಗಿ ಚಲಿಸಲಿದೆ ಎಂದು ಮನದಟ್ಟಾದ ಬಳಿಕ ಬಿ.ಎಂ. ಕಾವಲ್‌ ಬಳಿ ಕಾಡಿಗೆ ಬಿಟ್ಟೆವು. ಈ ಕಾರ್ಯಕ್ಕೆ ಬಳಗದ ಸದಸ್ಯೆ ರಶ್ಮಿ ಮಾವಿನ ಕುರ್ವೆ ನೆರವಾದರು’ ಎಂದು ವಿವರಿಸಿದರು.

‘ಅಂಟು ಜಾಲ ಅಪಾಯಕಾರಿ’
ಇಲಿಗಳನ್ನು ಹಿಡಿಯಲು ಬಳಸುವ ಅಂಟು ಜಾಲ ಇತರ ಜೀವಿಗಳಿಗೂ ಕುತ್ತು ತರುತ್ತದೆ. ಅದರ ಮಾರಾಟವನ್ನು ನಿಷೇಧಿಸಬೇಕು ಎಂದು ಸೋಮು ಒತ್ತಾಯಿಸಿದರು.

‘ಇಲಿ ಹಿಡಿಯಲು ಬಳಸುವ ಅಂಟು ಜಾಲವನ್ನು ಕೆಲವರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಅದಕ್ಕೆ ಕೆಲವು ಹಕ್ಕಿಗಳು, ಇತರ ಜೀವಿಗಳೂ ಸಿಲುಕಿ ಸಾಯುವ ಅ‍ಪಾಯವಿದೆ’ ಎಂದರು.

‘ಇಲಿಗಳನ್ನು ಕೊಲ್ಲಲು ವಿಷಕಾರಿ ಔಷಧವನ್ನೂ ಕೆಲವರು ಬಳಸುತ್ತಾರೆ. ಇದು ಇನ್ನೂ ಅಪಾಯಕಾರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT