ಕಾಡುಬೀಸನಹಳ್ಳಿ: ಸ್ಕೈವಾಕ್‌ ನಿರ್ಮಿಸಲು ಕೋರಿಕೆ

7
ಟೆಕಿಗಳ ಮನವಿಗೆ ಸ್ಪಂದಿಸಿದ ಪ್ರಧಾನಿ ಕಚೇರಿ

ಕಾಡುಬೀಸನಹಳ್ಳಿ: ಸ್ಕೈವಾಕ್‌ ನಿರ್ಮಿಸಲು ಕೋರಿಕೆ

Published:
Updated:

ಬೆಂಗಳೂರು: ಕಾಡುಬೀಸನಹಳ್ಳಿ ಹೊರ ವರ್ತುಲ ರಸ್ತೆಯ ಬಳಿ ಸ್ಕೈವಾಕ್‌ ನಿರ್ಮಿಸಬೇಕು ಎಂದು ಇಬ್ಬರು ಐಟಿ ಕಂಪನಿ ಉದ್ಯೋಗಿಗಳು ಪ್ರಧಾನಿ ಕಚೇರಿಯ ಸಾರ್ವಜನಿಕ ಅಹವಾಲು ವೆಬ್‌ಸೈಟ್‌ನಲ್ಲಿ ಸಲ್ಲಿಸಿದ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. 

ಸಂದೀಪ್‌ ಕೆ. ಹಾಗೂ ಪ್ರಸಾದ್‌ ಪೊಲ್ಲಿಸೆಟ್ಟಿ ಕಳೆದ ನವೆಂಬರ್‌ನಲ್ಲಿ ಈ ಪ್ರದೇಶದಲ್ಲಿ ಸ್ಕೈವಾಕ್‌ ನಿರ್ಮಿಸುವಂತೆ ಕೋರಿದ್ದರು. ಈ ಪರಿಸರದಲ್ಲಿ ಅನೇಕ ಮನೆಗಳು, ಒಂದು ಕಾಲೇಜು ಮತ್ತು ಎರಡು ತಂತ್ರಜ್ಞಾನ ಪಾರ್ಕ್‌ಗಳಿವೆ. ಪ್ರತಿದಿನ ಸಾವಿರಾರು ಜನರು ಇಲ್ಲಿ ರಸ್ತೆ ದಾಟಲು ಕಷ್ಟಪಡುತ್ತಾರೆ. ಎರಡು ಮುಖ್ಯ ರಸ್ತೆ, ಎರಡು ಸರ್ವೀಸ್‌ ರಸ್ತೆಗಳು ಹಾದು ಹೋಗಿರುವ ಈ ಪ್ರದೇಶದಲ್ಲಿ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ರಸ್ತೆ ದಾಟಬೇಕಾದರೆ ಪಾದಚಾರಿಗಳು ಅಪಾಯ ಎದುರಿಸಬೇಕಾದ ವಾತಾವರಣ ಇದೆ. ಈ ಕಾರಣಕ್ಕಾಗಿ ಇಲ್ಲಿ ಸ್ಕೈವಾಕ್‌ ಅಗತ್ಯವಿದೆ ಎಂದು ಅವರು ಮನವಿಯಲ್ಲಿ ಹೇಳಿದ್ದರು. 

ಪ್ರಧಾನಿ ಕಚೇರಿಯು ಈ ಕೋರಿಕೆಯನ್ನು ಫೆ. 27ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಸಂಚಾರ ಪೊಲೀಸ್‌ ಕಚೇರಿಗೆ ಕಳುಹಿಸಿತ್ತು. ಪೊಲೀಸ್‌ ಅಧಿಕಾರಿಗಳು ಈ ಪತ್ರವನ್ನು ಬಿಬಿಎಂಪಿಗೆ ರವಾನಿಸಿದ್ದರು.

‘ಈ ಪ್ರದೇಶದಲ್ಲಿ ಸ್ಕೈವಾಕ್‌ ನಿರ್ಮಿಸಲು ಟೆಂಡರ್‌ ಕರೆಯಲಾಗಿತ್ತು. ಆದರೆ, ಇಲ್ಲಿ ಮೆಟ್ರೊ 2ಎ ಹಂತದ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಮುಗಿಯುವವರೆಗೆ ಸ್ಕೈವಾಕ್‌ ನಿರ್ಮಾಣ ಯೋಜನೆಯನ್ನು ತಡೆಹಿಡಿಯುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮವು ಬಿಬಿಎಂಪಿಯನ್ನು ಕೋರಿದೆ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !