ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಊಟವನ್ನೂ ಕೊಡದೆ ಹಿಂಸೆ: ಕಫೀಲ್‌ ಖಾನ್‌

Last Updated 4 ಡಿಸೆಂಬರ್ 2022, 20:53 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನನ್ನು ಬೆತ್ತಲೆ ಮಾಡಲಾಗುತ್ತಿತ್ತು. ಕುಡಿದು ಬರುವ ಪೊಲೀಸರು ಬೆಲ್ಟು, ಕೋಲು, ರಾಡ್‌ನಿಂದ ಹೊಡೆಯುತ್ತಿದ್ದರು. ಅವರ ಮುಖದಲ್ಲಿ ನನ್ನ ವಿರುದ್ಧ ಅವರಿಗಿದ್ದ ದ್ವೇಷ ಕಾಣುತ್ತಿತ್ತು’ ಎಂದು ಕಾರಾಗೃಹದಲ್ಲಿ ಕಳೆದ ದಿನಗಳನ್ನು ಡಾ.ಕಫೀಲ್‌ ಖಾನ್‌ ಅವರು ನೆನಪಿಸಿಕೊಂಡರು.

ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ತಮ್ಮ ಪುಸ್ತಕ ‘ದಿ ಗೋರಖಪುರ್‌ ಹಾಸ್ಪಿಟಲ್‌ ಟ್ರಾಜೆಡಿ’ ಕುರಿತು ಮಾತನಾಡಿದರು.

‘4–5 ದಿನಗಳ ವರೆಗೆ ನನಗೆ ಊಟ ಕೊಡುತ್ತಿರಲಿಲ್ಲ. ಹೊರಗಡೆ ಚಿಕನ್‌, ಕೇಕ್‌, ದೋಸೆ, ಇಡ್ಲಿ ಅಂತೆಲ್ಲಾ ಎಲ್ಲರೂ ತಿನ್ನುತ್ತಿದ್ದರು. ಆದರೆ, ನನಗೆ ಊಟ ಕೊಡುತ್ತಿರಲಿಲ್ಲ.
ಹಸಿವಾದಾಗ ನನ್ನ ಅಂಗಿಯನ್ನು ಕಚ್ಚಿಕೊಳ್ಳುತ್ತಿದ್ದೆ. ನನ್ನ ಕೊಠಡಿಯ ಹೊರಗೆ ಬೆಳೆದಿದ್ದ ಹುಲ್ಲು ತಿನ್ನುತ್ತಿದ್ದೆ’ ಎಂದು ಹೇಳುತ್ತಾ ಭಾವುಕರಾದರು.

‘ಮೂತ್ರವಿಸರ್ಜನೆ ಮಾಡಿದರೆ, ನೀರು ಕೂಡ ಕೊಡುತ್ತಿರಲಿಲ್ಲ.
ನನ್ನ ಕೈಯಲ್ಲಿ ಶೌಚಾಲಯ ತೊಳೆಸಿದರು, ನೆಲ ಸ್ವಚ್ಛ ಮಾಡಿಸಿದರು. 180 ಅಪರಾಧಿಗಳಿರುವ ಕೊಠಡಿಯಲ್ಲಿ ಮಲಗಲು ಹೇಳುತ್ತಿದ್ದರು. ಮಾಡಿರದ ತಪ್ಪಿಗಾಗಿ 500ಕ್ಕೂ ಹೆಚ್ಚು ದಿನಗಳ ವರೆಗೆ ಕಾರಾಗೃಹದಲ್ಲಿ ಕಷ್ಟ ಅನುಭವಿಸಿದೆ’ ಎಂದರು.

ಸಿಎಂ ಸ್ಥಾನ ಉಳಿಸಿಕೊಳ್ಳಬೇಕಿತ್ತು: ‘ಗೋರಖಪುರವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸ್ವಕ್ಷೇತ್ರ.ಹಿಂದೂ ಡಾಕ್ಟರ್‌ ಒಬ್ಬ ನನ್ನ ಸ್ಥಾನದಲ್ಲಿ ಇದ್ದರೂ
ಯೋಗಿ ಅವರು ಹೀಗೆಯೇ ಮಾಡುತ್ತಿದ್ದರು. ಆದರೆ, ಹೆಸರಿನ ಮುಂದೆ ಖಾನ್‌ ಎಂದು ಇದ್ದರೆ ಅದೊಂದು ಉತ್ತಮ ಮಾರಾಟದ ಸರಕಷ್ಟೇ. ಅವರಿಗೆ ಅವರ ಸ್ಥಾನ ಉಳಿಸಿಕೊಳ್ಳಬೇಕಿತ್ತು’ ಎಂದು ಹೇಳಿದರು.

ರವಿ ಜೋಶಿ ಅವರು ಗೋಷ್ಠಿಯನ್ನು ನಿರ್ವಹಿಸಿದರು.

ಮಾಧ್ಯಮಗಳ ಕುರಿತು ಬೇಸರ

ದೆಹಲಿ, ಮುಂಬೈಯಲ್ಲಿ ಕೂತ ದೊಡ್ಡ ದೊಡ್ಡ ಸುದ್ದಿವಾಹಿನಿಗಳ ಮುಖ್ಯಸ್ಥರಿಗೆ ನಿಜವಾಗಿ ಕಫೀಲ್‌ ಖಾನ್‌ ಯಾರು ಎಂದು ತಿಳಿಯುವ ಕುತೂಹಲ ಇರಲಿಲ್ಲ. ಸತ್ಯ ತಿಳಿಯಲು ಯಾರೂ ಗೋರಖಪುರಕ್ಕೆ ಬರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ನನ್ನ ವಿರುದ್ಧದ ಸುಳ್ಳು ಸುದ್ದಿಗಳನ್ನು ಆಧರಿಸಿ ವರದಿ ಮಾಡಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

ಕಫೀಲ್‌ ಖಾನ್‌ ಯಾರು?

ಗೋರಖಪುರ ಸರ್ಕಾರಿ ಆಸ್ಪತ್ರೆಯೊಂದರಲ್ಲಿ 63 ಹಸುಳೆಗಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು. ಈ ವೇಳೆ ಕೆಲವು ಆಮ್ಲಜನಕ ಸಿಲಿಂಡರ್‌ಗಳನ್ನು ತಕ್ಷಣದಲ್ಲಿ ಹೊಂದಿಸಿದ ಕಫೀಲ್‌ ಖಾನ್‌ ಕೆಲವು ಮಕ್ಕಳ ಜೀವ ಉಳಿಸಿದ್ದಾಗಿ 2017ರಲ್ಲಿ ವರದಿಯಾಗಿತ್ತು. ಕಫೀಲ್‌ ಅವರ ನಿರ್ಲಕ್ಷ್ಯದಿಂದ ಆಮ್ಲಜನಕ ಕೊರತೆ ಆಗಿದೆ ಮತ್ತು ಇತರ ಆರೋಪಗಳನ್ನು ಹೊರಿಸಿ ಅವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT