ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀಮ, ದುರ್ಯೋಧನ ಪಾತ್ರ ಅಪ್ರಸ್ತುತ’

ಕವಿ ನಾರಾಯಣ ಘಟ್ಟ ಹೇಳಿಕೆಗೆ ಸಭಿಕರ ಆಕ್ಷೇಪ * ಗಿರೀಶ್ ಕಾರ್ನಾಡ್ ನೆನಪಿನ ನಾಟಕೋತ್ಸವಕ್ಕೆ ಚಾಲನೆ
Last Updated 2 ಆಗಸ್ಟ್ 2022, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಭೀಮ, ದುರ್ಯೋಧನ ಸೇರಿ ರಾಮಾಯಣ ಮತ್ತು ಮಹಾಭಾರತದಲ್ಲಿನ ಪಾತ್ರಗಳನ್ನು ಒಳಗೊಂಡ ಪೌರಾಣಿಕ ನಾಟಕಗಳು ಈಗ ಅಪ್ರಸ್ತುತ’ಎಂಬ ಕವಿ ಪ್ರೊ. ನಾರಾಯಣ ಘಟ್ಟ ಅವರ ಹೇಳಿಕೆಗೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು.

ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮೂರು ದಿನಗಳ ‘ಗಿರೀಶ್ ಕಾರ್ನಾಡ್ ನೆನಪಿನ ನಾಟಕೋತ್ಸವ’ಕ್ಕೆ ಚಾಲನೆ ನೀಡಿ, ಮಾತನಾಡಿದರು. ‘ಸಮಾಜದ ವಸ್ತುಗಳನ್ನೇ ಆಯ್ಕೆ ಮಾಡಿಕೊಂಡು ನಾಟಕಗಳನ್ನು ಪ್ರದರ್ಶಿಸಬೇಕು. ಅದೇ ರಾಮಾಯಣ, ಮಹಾಭಾರತವನ್ನು ಹೇಳಲು ಸಾಧ್ಯವಿಲ್ಲ. ಹೊಸದನ್ನು ಕಟ್ಟಿಕೊಡಬೇಕು. ನಾಟಕಗಳ ಮೂಲಕ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕು’ ಎಂದು ಹೇಳಿದರು.

‘ಭೀಮ, ದುರ್ಯೋಧನ ಸೇರಿ ವಿವಿಧ ಪೌರಾಣಿಕ ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಅವೇ ನಾಟಕಗಳ ಜೀವಾಳ’ ಎಂದು ನೆರೆದಿದ್ದ ಸಭಿಕರು ಹಾಗೂ ಕಲಾವಿದರು ಗಟ್ಟಿ ಧ್ವನಿಯಲ್ಲಿ ಹೇಳಿ,ನಾರಾಯಣ ಘಟ್ಟ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣದ ಭಾಗವಾಗಲಿ: ‘ನಾಟಕಗಳುಜನರ ಮನಸ್ಥಿತಿಯನ್ನು ಸಾತ್ವಿಕದ ಕಡೆಗೆ ಕೊಂಡೊಯ್ಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾಟಕಗಳುಮಹತ್ವ ಕಳೆದುಕೊಳ್ಳುತ್ತಿವೆ. ರಂಗಭೂಮಿಯನ್ನು ಒಂದು ಕಲೆಯೆಂದು ಮಾತ್ರ ಪರಿಗಣಿಸಲಾಗುತ್ತಿದೆ. ಇದು ಒಂದು ವಿದ್ಯೆ ಎನ್ನುವುದನ್ನು ಅರಿತುಕೊಳ್ಳಬೇಕು. ನಾಟಕಗಳ ಕಲಿಕೆಯನ್ನು ಪ್ರೌಢ ಶಿಕ್ಷಣದ ಹಂತದಲ್ಲಿ ಅಳವಡಿಸಬೇಕು’ ಎಂದು ನಾರಾಯಣ ಘಟ್ಟ ಹೇಳಿದರು.

‘ರಂಗಭೂಮಿ ಶಿಕ್ಷಣದ ಭಾಗವಾದರೆ ಉದ್ಯೋಗ ಸೃಷ್ಟಿಯಾಗುತ್ತದೆ.ಮಕ್ಕಳಲ್ಲಿನ ಏಕತಾನತೆ ಹೋಗಲಾಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ರಂಗ ಶಿಕ್ಷಣಕ್ಕೆ ಆದ್ಯತೆ ನೀಡಿ, ವಾರದಲ್ಲಿ ಒಂದಷ್ಟು ಅವಧಿ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ರಂಗಕರ್ಮಿ ಬಿ.ವಿ. ರಾಜಾರಾಮ್, ‘ಎಲ್ಲ ರಂಗಭೂಮಿಯನ್ನು ಕರ್ನಾಟಕದಲ್ಲಿ ಪ್ರೋತ್ಸಾಹಿಸಲಾಗಿದೆ. ಗಿರೀಶ್ ಕಾರ್ನಾಡ್ ಅವರು ಆಧುನಿಕ ಚಿಂತನೆಯ ನಾಟಕಗಳನ್ನು ಬರೆದಿದ್ದಾರೆ. ಕನ್ನಡವನ್ನು ಅದ್ಭುತವಾಗಿ ಬಳಸಿದ್ದಾರೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಪ್ರಕಾಶ್‌ಮೂರ್ತಿ,‘ರಂಗಭೂಮಿಯಲ್ಲಿ ಅನೇಕ ಒಳನೋಟ ನೋಡಲು ಸಾಧ್ಯ. ನಾನು ಕೂಡ ಭೀಮ, ದುರ್ಯೋಧನನ ಪಾತ್ರ ಮಾಡಿರುವೆ. ಸಾಂಸ್ಕೃತಿಕ ಲೋಕದ ಮೇಲೆ ಸದಾ ಗದಾಪ್ರಹಾರ ನಡೆಯುತ್ತಿದೆ’ ಎಂದು ತಿಳಿಸಿದರು.

ಸಮುದಾಯ ತಂಡದವರು ಗಿರೀಶ್ ಕಾರ್ನಾಡ್ ಅವರ ‘ತುಘಲಕ್’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT