ಬುಧವಾರ, ನವೆಂಬರ್ 20, 2019
21 °C

ಸಿ.ಅಶ್ವಥ್ಥ್ ಕಲಾಭವನ ಉದ್ಘಾಟನೆ 8ರಂದು

Published:
Updated:

ಬೆಂಗಳೂರು: ಬಸವನಗುಡಿ ವಾರ್ಡ್‌ನ ಎನ್‌.ಆರ್‌.ಕಾಲೊನಿಯಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ನೂತನ ಸಿ.ಅಶ್ವತ್ಥ್ ಕಲಾಭವನ ಇದೇ 8ರಂದು ಉದ್ಘಾಟನೆಗೊಳ್ಳಲಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೇಯರ್‌ ಎಂ.ಗೌತಮ್‌ ಕುಮಾರ್‌, ‘ರಾಜ್ಯೋತ್ಸವ ಆಚರಿಸುತ್ತಿರುವ ನವೆಂಬರ್‌ ತಿಂಗಳಿನಲ್ಲಿ ಉದ್ಘಾಟನೆಯಾಗುತ್ತಿರುವ ಈ ಹವಾನಿಯಂತ್ರಿತ ಕಲಾಭವನ ಬಿಬಿಎಂಪಿ ವತಿಯಿಂದ ನಗರದ ಜನತೆಗೆ ನೀಡುತ್ತಿರುವ ಕೊಡುಗೆ. ವಾರ್ಡ್‌ ಮಟ್ಟದಲ್ಲಿ ಇಂತಹ ಸುಸಜ್ಜಿತ ಕಲಾಭವನ ನಿರ್ಮಾಣವಾಗಿರುವುದು ಇದೇ ಮೊದಲು’ ಎಂದರು.

 ಬಸವನಗುಡಿ ವಾರ್ಡ್‌ನ ಪಾಲಿಕೆ ಸದಸ್ಯ ಬಿ.ಎಸ್‌.ಸತ್ಯನಾರಾಯಣ, ‘ಕಲಾಭವನ ಕಟ್ಟಡದ ನೆಲಮಹಡಿಯಲ್ಲಿ ಪಾಲಿಕೆಯ ವಾರ್ಡ್‌ ಕಚೇರಿ ಹಾಗೂ ಆರೋಗ್ಯ ವಿಭಾಗದ ಕಚೇರಿಗಳಿವೆ. ಮೊದಲ ಮಹಡಿಯಲ್ಲಿ ಕಲಾಭವನ ಇದೆ. ಅತ್ಯುತ್ತಮ ಧ್ವನಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಪ್ರೊಜೆಕ್ಟರ್‌ ಕೊಠಡಿ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಡ್ರೆಸ್ಸಿಂಗ್‌ ಕೊಠಡಿಗಳಿವೆ’ ಎಂದರು.

‘ಕಲಾಭವನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಬಾಡಿಗೆಗ ನೀಡುತ್ತೇವೆ. ದಿನವೊಂದಕ್ಕೆ ₹ 10 ಸಾವಿರ ಬಾಡಿಗೆ ನಿಗದಿಪಡಿಸುವ ಚಿಂತನೆ ಇದೆ. ಈ ಮೊತ್ತ ಅಂತಿಮವಲ್ಲ. ಪಾಲಿಕೆ ಕೌನ್ಸಿಲ್‌ ಸಭೆಯ ಅಂಗೀಕಾರ ಪಡೆದ ಬಳಿಕ ಬಾಡಿಗೆ ಮೊತ್ತವನ್ನು ಪ್ರಕಟಿಸುತ್ತೇವೆ. ಆನ್‌ಲೈನ್‌ನಲ್ಲಿ ಹಾಗೂ ಸ್ಥಳದಲ್ಲೇ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಇದೆ’ ಎಂದು ಮಾಹಿತಿ ನೀಡಿದರು.

ಈ ಕಲಾಭವನದಲ್ಲಿ 100 ದ್ವಿಚಕ್ರ ವಾಹನಗಳಿಗೆ ಹಾಗೂ 10 ಕಾರುಗಳಿಗೆ ನಿಲುಗಡೆಗೆ ಸ್ಥಳಾವಕಾಶ ಇದೆ ಎಂದರು.

‘ಮೂರು ದಿನಗಳ ಕಾಲ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಾಹಿತಿಗಳು, ಕಲಾವಿದರು ಹಾಗೂ ಗಾಯಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೃತ್ಯೋತ್ಸವ, ನಾಟಕ ಹಾಗೀ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ಸುದ್ದಿಗೋಷ್ಠೀಯಲ್ಲಿ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)