ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಇಲಾಖೆ ನಡೆಗೆ ಕಲಾವಿದರ ಆಕ್ರೋಶ

ಧನಸಹಾಯ ಯೋಜನೆಯ ಹಾಲಿ ಮಾರ್ಗಸೂಚಿ ರದ್ದತಿಗೆ ಆಗ್ರಹ
Last Updated 1 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ನೀಡುವ ಧನಸಹಾಯಕ್ಕೆ ಸಂಬಂಧಿಸಿದಂತೆ ಹಾಲಿ ಮಾರ್ಗಸೂಚಿಯನ್ನು ರದ್ದುಪಡಿಸಿ, ಕನಿಷ್ಠ ₹ 5 ಲಕ್ಷದಿಂದ ಗರಿಷ್ಠ ₹ 15 ಲಕ್ಷದವರೆಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಕಲಾವಿದರು ಹಾಗೂ ಸಾಹಿತಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟ ನಗರದಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ಧನಸಹಾಯಕ್ಕೆ ಸಂಬಂಧಿಸಿದಂತೆ ಇಲಾಖೆಯ ನಡೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

‘ಧನಸಹಾಯದ ನಿಯಮಾವಳಿಯ ಬಗ್ಗೆ ಕಲಾವಿದರು, ಸಾಹಿತಿಗಳು ಮತ್ತು ಸಂಘ–ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸದ ಇಲಾಖೆ, ತನ್ನ ಮೂಗಿನ ನೇರಕ್ಕೆ ನಿಯಮಾವಳಿ ರೂಪಿಸಿದೆ. ಈ ನಿಯಮಾವಳಿಗಳು ಸಂಘ–ಸಂಸ್ಥೆಗಳ ಉಳಿವಿಗೆ ಮಾರಕವಾಗಿವೆ. ಆದ್ದರಿಂದ ಇನ್ನು ಮುಂದೆ ಧನಸಹಾಯ ಯೋಜನೆಯ ರೂಪು ರೇಷೆಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ವಲಯದ ಪ್ರಮುಖರೊಂದಿಗೆ ಚರ್ಚಿಸಿ, ನಿರ್ಣಯ ಕೈಗೊಳ್ಳಬೇಕು. ಸಂಘ–ಸಂಸ್ಥೆಗಳ ಕಾರ್ಯವ್ಯಾಪ್ತಿ ಅನುಸಾರ ಅನುದಾನ ನೀಡಬೇಕು. 2023–24ನೇ ಸಾಲಿನ ಧನಸಹಾಯಕ್ಕೆ ಪ್ರತ್ಯೇಕವಾಗಿ ಅನುದಾನ ಮೀಸಲಿಡಬೇಕು’ ಎಂದು ಕಲಾವಿದರು ಆಗ್ರಹಿಸಿದರು.

‘ಈ ಹಿಂದೆ ಸಂಘ–ಸಂಸ್ಥೆಗಳ ಹಿಂದಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಧನಸಹಾಯಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಉತ್ತಮವಾಗಿ ಕಾರ್ಯಕ್ರಮ ಮಾಡಿದ ಕೆಲವರಿಗೆ ₹ 10 ಲಕ್ಷದವರೆಗೂ ಅನುದಾನ ಬರುತ್ತಿತ್ತು. ಈಗ ಆಯ್ಕೆಯಾದ ಸಂಘ–ಸಂಸ್ಥೆಯೊಂದಕ್ಕೆ ಅನುದಾನದ ಗರಿಷ್ಠ ಮಿತಿಯನ್ನೂ ₹ 2 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಇಷ್ಟು ಹಣ ಪಡೆಯಲು ಹತ್ತಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಸಂಘ–ಸಂಸ್ಥೆಗಳಿಗೆ ಮಾರಕವಾಗಿದೆ. ಗರಿಷ್ಠ ನೆರವು ₹ 15 ಲಕ್ಷಕ್ಕೆ ಹೆಚ್ಚಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸ್ಪಂದಿಸದಿದ್ದಲ್ಲಿ ಹೋರಾಟ:‘ಧನಸಹಾಯಕ್ಕಾಗಿ ಸಂಸ್ಥೆಗಳು ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಬೇಕು. ಧನಸಹಾಯದವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದೆ ಬೃಹತ್ ಪ್ರತಿಭಟನೆ ನಡೆಸಬೇಕು.ಹಕ್ಕೊತ್ತಾಯ ಮೆರವಣಿಗೆ ನಡೆಸಲು ಹೋರಾಟದ ರೂಪುರೇಷೆಯನ್ನು ತಯಾರಿಸಬೇಕು’ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಕುಮಾರ್ ಕೆ.ಎಚ್., ವೈ.ಕೆ. ಮುದ್ದುಕೃಷ್ಣ, ಪ್ರತಿಭಾ, ನಾರಾಯಣ್, ಎ.ಆರ್. ಗೋವಿಂದ್ ಸ್ವಾಮಿ ನಾಯಕ್, ತಮಟೆ ನಾಗರಾಜು, ಮಾಲತೇಶ್ ಬಡಿಗೇರ್, ಶ್ರೀನಾಥ್, ರವೀಂದ್ರ ಸೊರಗಾವಿ, ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ದೊಡ್ಡವಾಡ, ಸವಿತಾ ಗಣೇಶ್, ಪ್ರಸಾದ್ ಸಬರದ, ಪುಣ್ಯೇಶ್ ಕುಮಾರ್, ಶಂಕರ ಭಾರತಿಪುರ, ಸಬ್ಬನಹಳ್ಳಿ ರಾಜು ಸೇರಿ ನಗರದ ಕಲಾವಿದರು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಚಿಂತಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT