ನಾಗರಬಾವಿ ಕೆ.ಕೆ. ಬಡಾವಣೆ: ಸವಾರನ ಮೇಲೆ ಕಾರು ಹರಿಸಿದ್ದ ವೈದ್ಯೆ ಬಂಧನ

ಬೆಂಗಳೂರು: ನಾಗರಬಾವಿ ಬಳಿಯ ಕೆ.ಕೆ. ಬಡಾವಣೆ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರ ಮೇಲೆ ಕಾರು ಹರಿಸಿ ಗಾಯಗೊಳಿಸಿದ್ದ ಆರೋಪದಡಿ ದಂತವೈದ್ಯೆ ಡಾ. ಲಕ್ಷ್ಮಿ ಅವರನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
‘ಮೇ 21ರಂದು ಬೆಳಿಗ್ಗೆ ನಡೆದಿದ್ದ ಅಪಘಾತ ಸಂಬಂಧ ಗಾಯಾಳು ಪಾಪರೆಡ್ಡಿಪಾಳ್ಯದ ಪ್ರಭಾಕರ್ (52) ಅವರು ದೂರು ನೀಡಿದ್ದರು. ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಚಾಲನೆ (ಐಪಿಸಿ 279) ಹಾಗೂ ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಳಿಸಿದ (ಐಪಿಸಿ 338) ಆರೋಪದಡಿ ವೈದ್ಯೆ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.
‘ವೈದ್ಯೆ ಲಕ್ಷ್ಮಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರಿಗೆ ಜಾಮೀನು ಮಂಜೂರಾಗಿದ್ದರಿಂದ, ಬಿಡುಗಡೆ ಮಾಡಲಾಗಿದೆ. ಕಾರು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.
ಅಪಘಾತದ ವಿವರ: ‘ಕೆ.ಕೆ.ಮುಖ್ಯರಸ್ತೆಯಲ್ಲಿ ದೀಪಾ ಕಾಂಪ್ಲೆಕ್ಸ್ ಕಡೆಯಿಂದ ಪಾಪರೆಡ್ಡಿಪಾಳ್ಯ ಕಡೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದೆ. ಇದೇ ವೇಳೆ ಅತೀ ವೇಗವಾಗಿ ಬಂದ ಕಾರು (ಕೆಎ 05 ಎನ್ಡಿ 9391), ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ಕೆಳಗೆ ಬಿದ್ದ ನನ್ನ ಮೇಲೆಯೇ ಕಾರಿನ ಚಕ್ರ ಹರಿಯಿತು’ ಎಂದು ದೂರಿನಲ್ಲಿ ಪ್ರಭಾಕರ್ ಹೇಳಿದ್ದಾರೆ.
‘ಮಗ ಹಾಗೂ ಸಾರ್ವಜನಿಕರು ನನ್ನನ್ನು ಯೂನಿಟಿ ಲೈಫ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತದಿಂದಾಗಿ ನನ್ನ ಬಲಗಾಲು ಹಾಗೂ ತೊಡೆಗೆ ತೀವ್ರ ಪೆಟ್ಟು ಬಿದ್ದಿದೆ. ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿರುವ ಕಾರಿನ ಚಾಲಕಿ ಡಾ. ಲಕ್ಷ್ಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ತಿಳಿಸಿದ್ದಾರೆ.
‘ಅಪಘಾತದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಷ್ಟಾದರೂ ಏನು ಆಗಿಲ್ಲವೆಂಬಂತೆ ವೈದ್ಯೆ ಹಾಗೂ ಅವರ ಪತಿ ವಾದಿಸುತ್ತಿದ್ದಾರೆ’ ಎಂದೂ ಪ್ರಭಾಕರ್ ದೂರಿದ್ದಾರೆ.
ಸಂಧಾನಕ್ಕೆ ಯತ್ನಿಸಿದ್ದ ವೈದ್ಯೆ: ಗಾಯಾಳು ಜೊತೆ ಸಂಧಾನ ಮಾಡಿಸಿ ಠಾಣೆಯಲ್ಲೇ ಪ್ರಕರಣ ಇತ್ಯರ್ಥಪಡಿಸುವಂತೆ ವೈದ್ಯೆ, ಪೊಲೀಸರ ಮೊರೆ ಹೋಗಿದ್ದರು. ಆದರೆ, ಗಾಯಾಳು ಪ್ರಭಾಕರ್ ಸಂಧಾನಕ್ಕೆ ಒಪ್ಪದೇ ಪ್ರಕರಣ ದಾಖಲಿಸಿರುವುದಾಗಿ ಗೊತ್ತಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.