ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಷ್ಟರ ಪಾಲಿನ ‘ಕಾಮಧೇನು’ ಬಿಡಿಎ: ಸಿಗದ ಪರಿಹಾರ; ಸಂತ್ರಸ್ತರ ಅರಣ್ಯರೋದನ

ಬಡಾವಣೆಗಳಿಗೆ ಸಿಗದ ಮೂಲಸೌಕರ್ಯ
Last Updated 20 ಏಪ್ರಿಲ್ 2023, 6:39 IST
ಅಕ್ಷರ ಗಾತ್ರ

ಬೆಂಗಳೂರು: ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಪರಿಹಾರ ವಿತರಣೆಯಲ್ಲಿ ಲೋಪ, ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ, ಕಾಮಗಾರಿಗಳಿಗೆ ಗುತ್ತಿಗೆಯಲ್ಲಿ ಅಕ್ರಮ, ನಿಯಮಗಳ ಉಲ್ಲಂಘನೆ...

ಇವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿರುದ್ಧ ಪದೇ ಪದೇ ಕೇಳಿಬರುತ್ತಿರುವ ಗಂಭೀರ ಆರೋಪಗಳು.

ರಾಜಧಾನಿಯ ಜನರ ನೆಮ್ಮದಿಯ ಜೀವನಕ್ಕೆ ದಾರಿ ತೋರಬೇಕಿದ್ದ ಬಿಡಿಎ ಭ್ರಷ್ಟಾಚಾರದ ಆಗರ ಎನ್ನುವುದು ಸಾಮಾನ್ಯ ಮಾತು. ರಾಜಧಾನಿಯ ಆಡಳಿತದ ಚುಕ್ಕಾಣಿ ಹಿಡಿದಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಭ್ರಷ್ಟರ ಕೂಪವಾಗಿದೆ ಎಂಬುದು ನಿವೇಶನದಾರರು ಹಾಗೂ ಸಂತ್ರಸ್ತರ ಆರೋಪ.

ಭ್ರಷ್ಟರ ಪಾಲಿಗೆ ಸಮೃದ್ಧವಾಗಿ ಮೇಯುವ ಹುಲ್ಲುಗಾವಲು ಎಂಬುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಆದರೂ ಬದಾವಣೆಯಾಗಿಲ್ಲ ಎಂದು ಹೋರಾಟಗಾರರು ಹೇಳುತ್ತಾರೆ. ಈ ಕಳಂಕದಿಂದ ಹೊರಬರುವ ಪ್ರಯತ್ನಗಳೂ ನಡೆಯುತ್ತಿಲ್ಲ.

ಶಾಲೆ ನಿರ್ಮಿಸುವುದಾಗಿ ಶಾಸಕರೊಬ್ಬರು ಬಿಡಿಎನಿಂದ ನಿವೇಶನ ಪಡೆದಿದ್ದರು. ನಿಗದಿತ ಉದ್ದೇಶಕ್ಕೆ ಆ ನಿವೇಶನ ಬಳಸಿಕೊಂಡಿರಲಿಲ್ಲ. ನಿಗದಿತ ಉದ್ದೇಶಕ್ಕೆ ಬಳಸದಿದ್ದರೆ ಎರಡು ವರ್ಷಗಳ ಒಳಗೆ ಆಗ ನಿವೇಶನ ವಾಪಸ್ ಪಡೆಯಬೇಕೆಂಬ ನಿಯಮವಿದೆ. ಆದರೆ, ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.‌

ರಾಜಧಾನಿಯಲ್ಲಿ ರಿಯಲ್‌ ಎಸ್ಟೇಟ್‌ಗೆ ಶುಕ್ರದೆಸೆ ಬಂದ ಮೇಲೆ ಬಿಡಿಎ ಸಹ ಸಾಕಷ್ಟು ಬಡಾವಣೆ ನಿರ್ಮಿಸಿದೆ. ಅಂತಹ ಬಡಾವಣೆಗಳಿಗೆ ಹಲವು ವರ್ಷಗಳು ಕಳೆದರೂ ಮೂಲಸೌಕರ್ಯವನ್ನೇ ಕಲ್ಪಿಸಿಲ್ಲ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬನಶಂಕರಿ 6ನೇ ಹಂತ, ಕೆಂಪೇಗೌಡ ಬಡಾವಣೆಗಳಲ್ಲಿ ಸೌಕರ್ಯಗಳ ಕೊರತೆ ಎದುರಾಗಿದೆ. ಬರೀ ನಿವೇಶನಗಳನ್ನಾಗಿ ಪರಿವರ್ತಿಸಿ ಬಿಡಿಎ ಸುಮ್ಮನಾಗುತ್ತಿದೆ! ಅಲ್ಲಿನ ನಿವಾಸಿಗಳಿಗೆ ಮಳೆಗಾಲ ಸಂಕಷ್ಟ ತಂದೊಡ್ಡುತ್ತಿದೆ.

‘ಬನಶಂಕರಿಯ ಹಲವು ಬ್ಲಾಕ್‌ನಲ್ಲಿ ಬಡಾವಣೆ ನಿರ್ಮಾಣವಾಗಿ 23 ವರ್ಷ ಕಳೆದಿದೆ. ಇಂದಿಗೂ ಯು.ಜಿ.ಡಿ ವ್ಯವಸ್ಥೆ ಸರಿಯಿಲ್ಲ. ತ್ಯಾಜ್ಯ ವಿಲೇವಾರಿ ಘಟಕ ಇಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ರಸ್ತೆಗಳು ಅಧ್ವಾನವಾಗಿವೆ. ಖಾಸಗಿ ಲೇಔಟ್‌ಗಿಂತ ಕಡೆಯಾಗಿದೆ. ಯಾವುದೇ ನಾಮಫಲಕಗಳು ಇಲ್ಲ’ ಎಂದು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ ಸಮಸ್ಯೆ ಕುರಿತು ಬೆಳಕು ಚೆಲ್ಲುತ್ತಾರೆ.

‘ನಗರಾಭಿವೃದ್ಧಿ ನಿಯಮಗಳ ಪ್ರಕಾರ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳು ಮತ್ತು ಉದ್ಯಾನಕ್ಕೆ ಸಾಕಷ್ಟು ಜಾಗ ಮೀಸಲಿಡಬೇಕು. ಆದರೆ, ಬಡಾವಣೆಯಲ್ಲಿ ಮೀಸಲಿಟ್ಟ ಜಾಗವು ಅನುಪಯುಕ್ತ ವಸ್ತುಗಳ ವಿಲೇವಾರಿ ತಾಣವಾಗಿದೆ. ಅಭಿವೃದ್ಧಿ ಕಾಣದೇ ಗಿಡಗಂಟಿಗಳು ಬೆಳೆದು ಉದ್ಯಾನ ಹಾಳುಕೊಂಪೆಯಾಗಿದೆ’ ಎಂದು ನಿವಾಸಿಗಳು ದೂರುತ್ತಾರೆ.

ಇನ್ನು ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಭೂಸ್ವಾಧೀನ ಮಾಡಿಕೊಂಡಿದ್ದ ಭೂಮಿಗೆ ಇದುವರೆಗೂ ಪರಿಹಾರ ವಿತರಿಸಿಲ್ಲ.

ಯಲಹಂಕ ತಾಲ್ಲೂಕಿನ 17 ಗ್ರಾಮಗಳ 3,546 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಕ್ಕೆ ಪಡೆದು ಬಿಡಿಎ ಬಡಾವಣೆ ನಿರ್ಮಿಸುತ್ತಿದೆ. 1894ರ ಬ್ರಿಟಿಷ್ ಕಾಯ್ದೆ ಅನ್ವಯ ಪರಿಹಾರ ಬೇಡ. ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯಿದೆ ಅಡಿ ಪರಿಹಾರ ನೀಡಬೇಕು ಎಂಬುದು ರೈತರ ಮನವಿ. ಆದರೆ, ಈ ಕೂಗಿಗೆ ಬಿಡಿಎ ಕಿಮ್ಮತ್ತು ನೀಡುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 2008ರಿಂದ ಭೂಮಿ ಕಳೆದುಕೊಂಡಿದ್ದವರು ಪಂಜಿನ ಮೆರವಣಿಗೆ, ಪೊರಕೆ ಚಳವಳಿ, ಉಪವಾಸ ಸತ್ಯಾಗ್ರಹ ನಡೆಸಿದ್ದರೂ ಪರಿಹಾರ ಸಿಕ್ಕಿಲ್ಲ. ಇತ್ತು ಜಮೀನು ಇಲ್ಲ. ಅತ್ತ ಪರಿಹಾರವೂ ಇಲ್ಲ ಸ್ಥಿತಿಯಲ್ಲಿ ನೂರಾರು
ಕುಟುಂಬಗಳಿವೆ.

ಜಾನುವಾರುಗಳಿಗೆ ಸಂಕಷ್ಟ

ಭೂಸ್ವಾಧೀನ ಪಡಿಸಿಕೊಂಡಿರುವ ಗ್ರಾಮಗಳಲ್ಲಿ ಸುಮಾರು ಮೂರು ಸಾವಿರ ಜಾನುವಾರುಗಳಿವೆ. ಬಡಾವಣೆ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ಫಲವತ್ತಾದ ಕೃಷಿಭೂಮಿ, ತೋಟ ಹಾಗೂ ವಿವಿಧ ಬೆಳೆಗಳನ್ನು ನಾಶಪಡಿಸಿರುವ ಪರಿಣಾಮ ಜಾನುವಾರುಗಳು ಮೇವಿಲ್ಲದೆ ನರಳುತ್ತಿವೆ. ಬಿಡಿಎ ತಕ್ಷಣ ಪಶು ಆಹಾರ ಒದಗಿಸಬೇಕು.

ಎಂ.ರಮೇಶ್, ರೈತಮುಖಂಡ, ರಾಮಗೊಂಡನಹಳ್ಳಿ

***

ದಾರಿ ತೋರುತ್ತಿಲ್ಲ

ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಅಥವಾ
ಶೇ 60:40ರ ಅನುಪಾತದಡಿ ನಿವೇಶನ ಹಂಚಿಕೆ
ಮಾಡುವ ವಿಚಾರದಲ್ಲಿಯೂ ಬಿಡಿಎ ಸ್ಪಷ್ಟತೆ ಇಲ್ಲ. ಹೋರಾಟಕಕ್ಕೂ ನ್ಯಾಯ ಸಿಕ್ಕಿಲ್ಲ. ಮುಂದಿನ ದಾರಿ ತೋರುತ್ತಿಲ್ಲ.

ಚಂದ್ರಿಕಾ, ರೈತ ಮಹಿಳೆ, ಬೆಟ್ಟಹಳ್ಳಿ

***

ಬೆಳೆಯೂ ನಾಶ

ಅರ್ಧ ಎಕರೆ ಜಮೀನಿನಲ್ಲಿ ಗುಲಾಬಿ ಹೂವು ಬೆಳೆದು ಮಾರಾಟ ಮಾಡುತ್ತಿದ್ದೆವು. ಅದೇ ಹಣದಲ್ಲಿ ಜೀವನ ನಡೆಸುತ್ತಿದ್ದೆವು. ಜಮೀನು ಸ್ವಾಧೀನಪಡಿಸಿಕೊಂಡ ಬಿಡಿಎ ಸರಿಯಾದ ಪರಿಹಾರ ನೀಡದೆ ಏಕಾಏಕಿ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶಪಡಿಸಿದೆ. ಪರಿಹಾರದ ಬಗ್ಗೆ
ಅಧಿಕಾರಿಗಳನ್ನು ಕೇಳಿದರೆ ಸ್ಪಷ್ಟವಾಗಿ ಯಾವುದನ್ನೂ ಹೇಳುತ್ತಿಲ್ಲ.

ರಾಧಮ್ಮ, ರೈತ ಮಹಿಳೆ, ರಾಮಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT