ಕನಕಪುರ ಮಾರ್ಗ: ಮೆಟ್ರೊ ಸಂಚಾರ 15ರಿಂದ

ಬೆಂಗಳೂರು: ಬಹುನಿರೀಕ್ಷಿತ ಯಲಚೇನಹಳ್ಳಿ– ಸಿಲ್ಕ್ ಇನ್‌ಸ್ಟಿಟ್ಯೂಷನ್ (ಕನಕಪುರ ರಸ್ತೆ) ವಿಸ್ತರಿತ ಮಾರ್ಗದಲ್ಲಿ ಇದೇ 15ರಿಂದ ಮೆಟ್ರೊ ರೈಲು ಸಂಚಾರ ಪ್ರಾರಂಭವಾಗಲಿದೆ.
‘6.29 ಕಿ.ಮೀ. ಉದ್ದದ ಈ ವಿಸ್ತರಿತ ಮಾರ್ಗವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜ.14ರಂದು ಉದ್ಘಾಟಿಸಲಿದ್ದು, ಮರುದಿನದಿಂದಲೇ ಸಾರ್ವಜನಿಕ ಸೇವೆ ಆರಂಭವಾಗಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದರು.
‘ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್ ಸಿಂಗ್ ಪುರಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಿನಾಂಕ ನಿಗದಿಯಾಗಿದೆ. 14 ಸಂಜೆ 4.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ’ ಎಂದು ಅವರು ತಿಳಿಸಿದರು.
ಕೋಣನಕುಂಟೆ ಕ್ರಾಸ್ ಮೆಟ್ರೊ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಹಸಿರು ಮಾರ್ಗದಡಿ ಬರುವ ಈ ವಿಸ್ತರಿತ ಮಾರ್ಗದಲ್ಲಿ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ನಿಲ್ದಾಣಗಳು ಇವೆ.
ರೈಲ್ವೆ ಸುರಕ್ಷತಾ ಆಯುಕ್ತರು ಎರಡು ತಿಂಗಳ ಹಿಂದೆಯೇ ಈ ಮಾರ್ಗಕ್ಕೆ ಹಸಿರು ನಿಶಾನೆ ನೀಡಿದ್ದರು. ಗಣ್ಯರು ದಿನಾಂಕ ಸಿಗದ ಕಾರಣ ಉದ್ಘಾಟನೆ ವಿಳಂಬವಾಗಿತ್ತು.
ಜೂನ್‌ನಲ್ಲಿ ಕೆಂಗೇರಿಗೆ ರೈಲು:
‘ಮೈಸೂರು ರಸ್ತೆ ವಿಸ್ತರಿತ ಮಾರ್ಗದಲ್ಲಿ ಅಂದರೆ ಕೆಂಗೇರಿಯವರೆಗೆ ಮುಂದಿನ ಜೂನ್ ವೇಳೆಗೆ ಮೆಟ್ರೊ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ’ ಎಂದು ಅಜಯ್ ಸೇಠ್ ಹೇಳಿದರು.
ನೇರಳೆ ಮಾರ್ಗದಡಿ ಬರುವ ಈ ವಿಸ್ತರಿತ ಮಾರ್ಗವು 7.5 ಕಿ.ಮೀ. ಉದ್ದವಿದೆ. ಈ ಎರಡು ವಿಸ್ತರಿತ ಮಾರ್ಗದಲ್ಲಿ ಸಂಚಾರ ಆರಂಭವಾದರೆ, ದಟ್ಟಣೆ ಅವಧಿಯಲ್ಲಿ ಐದು ನಿಮಿಷಗಳಿಗೆ ಒಂದರಂತೆ ರೈಲು ಓಡಿಸಲು ಸಾಧ್ಯವಾಗಲಿದೆ ಎಂದರು.
ಅವಧಿ ವಿಸ್ತರಣೆ ಇಲ್ಲ:
ಸದ್ಯ ರಾತ್ರಿ 9ರವರೆಗೆ ಮಾತ್ರ ಮೆಟ್ರೊ ರೈಲು ಸಂಚಾರ ನಡೆಯುತ್ತಿದೆ. ಈ ಅವಧಿಯನ್ನು ವಿಸ್ತರಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.