ಬುಧವಾರ, ಜುಲೈ 15, 2020
25 °C

ಕಂದಾಯ ಭವನದ ಸಿಬ್ಬಂದಿಗೂ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಗುತ್ತಿಗೆ ನೌಕರರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಆನೇಕಲ್ ಸಮೀಪದ ಗ್ರಾಮದ ನಿವಾಸಿಯಾಗಿರುವ ಸಿಬ್ಬಂದಿ (30 ವರ್ಷ) ತಾಲ್ಲೂಕು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದರು. ಅವರು ಶುಕ್ರವಾರ ರಜೆ ಪಡೆದಿದ್ದರು. ಶನಿವಾರ ಮತ್ತು ಭಾನುವಾರ ಕಚೇರಿಗೆ ರಜೆ ಇತ್ತು. ಹಾಗಾಗಿ ತಹಶೀಲ್ದಾರ್‌ ಕಚೇರಿ ಇರುವ ಕಂದಾಯ ಭವನವನ್ನು ಪೂರ್ತಿ ಸೀಲ್‌ಡೌನ್‌ ಮಾಡಬೇಕೇ ಬೇಡವೇ ಎಂಬ ಗೊಂದಲ ಜಿಲ್ಲಾಡಳಿತವನ್ನು ಕಾಡುತ್ತಿದೆ.

‘ಎರಡು ದಿನಗಳಿಂದ ಜ್ವರ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ಸೋಂಕು ಇರುವುದು ದೃಢಪಟ್ಟಿದೆ ಎಂದು ಕಂಪ್ಯೂಟರ್‌ ಆಪರೇಟರ್‌ ಅವರೇ ಕಚೇರಿಯ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಎರಡು ದಿನ ಕಚೇರಿಗೆ ರಜೆ ಇತ್ತು. ಹಾಗಾಗಿ ಕಚೇರಿಯನ್ನು ಸೀಲ್ ಡೌನ್ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಆರೋಗ್ಯಾಧಿಕಾರಿಗಳ ಬಳಿ ಚರ್ಚಿಸಿ ಮಂಗಳವಾರ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಅವರು ತಿಳಿಸಿದರು.

ಸೋಂಕಿತ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಕಚೇರಿ ಸೋಮವಾರ ತೆರೆದಿತ್ತು. ಈ ಕಟ್ಟಡದ ಇತರ ಕಚೇರಿಗಳೂ ಎಂದಿನಂತೆ ಕಾರ್ಯನಿರ್ವಹಿಸಿವೆ.

ಎನ್‌.ಎಚ್‌: ಇಬ್ಬರು ಅಧಿಕಾರಿಗಳಿಗೆ ಸೋಂಕು
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಎಂಜಿನಿಯರ್‌ಗಳಿಬ್ಬರಿಗೆ ಕೋವಿಡ್‌ ದೃಢಪಟ್ಟಿದೆ.

ಕೆ.ಆರ್.ವೃತ್ತದ ಬಳಿಯ ಲೋಕೋಪಯೋಗಿ ಇಲಾಖೆ ಕಟ್ಟಡ ಸಮುಚ್ಚಯದ ಎರಡನೇ ಮಹಡಿಯಲ್ಲಿದ್ದ ಕಚೇರಿಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಅವರ ಕಚೇರಿಯನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸೋಮವಾರ ಸ್ವಚ್ಛಗೊಳಿಸಲಾಗಿದೆ. 

ಇತ್ತೀಚೆಗೆ ಸೋಂಕು ಪತ್ತೆಯಾದರೂ ಬಿಬಿಎಂಪಿಯವರು ಇಡೀ ಕಟ್ಟಡ ಸಮುಚ್ಚಯವನ್ನು ಸೀಲ್‌ಡೌನ್‌ ಮಾಡುತ್ತಿಲ್ಲ. ಕೇವಲ ಕಚೇರಿ ಇದ ಮಹಡಿ ಹಾಗೂ ಆಸುಪಾಸಿನ ಕೊಠಡಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ. 

‘ಸೋಂಕು ಪತ್ತೆಯಾದ ಬಳಿಕವೂ ಇಡೀ ಕಟ್ಟಡವನ್ನು ಸೀಲ್‌ಡೌನ್ ಮಾಡಿಲ್ಲ. ಹಾಗಾಗಿ ಈ ಕಟ್ಟಡದಲ್ಲಿರುವ ಇತರ ಕಚೇರಿಗಳ ಸಿಬ್ಬಂದಿಯೂ ಆತಂಕದಿಂದ ಕೆಲಸಕ್ಕೆ ಹಾಜರಾಗಬೇಕಾಗಿದೆ’ ಎಂದು ಇದೇ ಕಟ್ಟಡದ ಕಚೇರಿಯೊಂದರಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು