ಸೋಮವಾರ, ನವೆಂಬರ್ 18, 2019
25 °C
ಸರ್ಕಾರ ಬಿಡುಗಡೆ ಮಾಡಿದರೂ ತಲುಪಲಿಲ್ಲ ಧನಸಹಾಯ

ಸಾಂಸ್ಕೃತಿಕ ಸಂಘಟನೆಗಳ ಆತಂಕ

Published:
Updated:
Prajavani

ಬೆಂಗಳೂರು: ಕಳೆದ ಸಾಲಿನ ಧನಸಹಾಯವನ್ನು ಸರ್ಕಾರ ಬಿಡುಗಡೆ ಮಾಡಿ ನಾಲ್ಕು ತಿಂಗಳಾಗುತ್ತಾ ಬಂದರೂ ಅನುದಾನ ಮಾತ್ರ ಸಾಂಸ್ಕೃತಿಕ ಸಂಘ–ಸಂಸ್ಥೆಗಳ ಮುಖ್ಯಸ್ಥರ ಕೈ ಸೇರಿಲ್ಲ.

ಕಳೆದ ವರ್ಷ ಧನಸಹಾಯ ಪ್ರಕ್ರಿಯೆ ಅಂತಿಮಗೊಳ್ಳುವ ಹೊತ್ತಿ ನಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಯಾಗಿತ್ತು. ಇಡೀ ಪ್ರಕ್ರಿಯೆ ಸ್ಥಗಿತ ಮಾಡಿದ ಸರ್ಕಾರ, ಯೋಜನೆಯ ಅನು ದಾನವನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಖಾತೆಯಲ್ಲಿ ಇಟ್ಟಿತ್ತು. ತಜ್ಞರ ಸಮಿತಿ ಶಿಫಾರಸು ಅನುಸಾರ ಧನಸಹಾಯಕ್ಕೆ ಆಯ್ಕೆಯಾಗಿದ್ದ ಸಾಂ ಸ್ಕೃತಿಕ ಸಂಘ–ಸಂಸ್ಥೆಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡಲು ಸರ್ಕಾರ ಜು.15ಕ್ಕೆ ಅನುಮೋದನೆ ನೀಡಿದೆ. 

ಧನಸಹಾಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಬಾರಿ ಕೆಲ ಬದಲಾವಣೆ ಮಾಡಿದ್ದ ಸರ್ಕಾರ, ₹ 2 ಲಕ್ಷಕ್ಕಿಂತ ಮೇಲ್ಪಟ್ಟು ಅನುದಾನ ಪಡೆಯುವ ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಅದರನ್ವಯ ₹2 ಲಕ್ಷದೊಳಗಿನ ಅನುದಾನವನ್ನು ಇಲಾಖೆಯಿಂದಲೇ ನೇರವಾಗಿ ಆರ್‌ಟಿಜಿಎಸ್ ಮಾಡಲು ಸೂಚಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿಗಳ ಕಾರ್ಯದೊತ್ತಡ ಹಾಗೂ ವಿವಿಧ ಕಾರಣದಿಂದಾಗಿ ಬಹುತೇಕ ಸಂಘ–ಸಂಸ್ಥೆಗಳಿಗೆ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. 

ಇಲಾಖೆ ನೇರವಾಗಿ ನೀಡುವ ಅನುದಾನ ಸಹ ಸಮರ್ಪಕವಾಗಿ ಸಂಘ–ಸಂಸ್ಥೆಗಳಿಗೆ ಸೇರುತ್ತಿಲ್ಲ ಎಂಬ ಆರೋಪ ಸಾಂಸ್ಕೃತಿಕ ಸಂಘಸಂಸ್ಥೆಗಳದ್ದಾಗಿದೆ. ಬ್ಯಾಂಕ್‌, ಆಧಾರ್ ಸೇರಿದಂತೆ ವಿವಿಧ ದಾಖಲಾತಿಗಳಲ್ಲಿ ಲೋಪವಿರುವ ಕಾರಣ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವುದು ವಿಳಂಬವಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ನಮಗೆ ₹ 10 ಲಕ್ಷ ಅನುದಾನ ಬಿಡುಗಡೆಯಾಗಬೇಕಿತ್ತು. ಆದರೆ, ಈವರೆಗೂ ಹಣ ಕೈಸೇರಿಲ್ಲ. ಇದರಿಂದ ಸಂಘ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಯಾವಾಗ ಅನುದಾನ ಬರುತ್ತದೆ ಎನ್ನುವುದೂ ತಿಳಿಯದಾಗಿದೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಭೇಟಿ ಮಾಡಿದವರಿಗೆ ಅನುದಾನ: ‘ಅತ್ಯಂತ ಪಾರ ದರ್ಶಕವಾದ ಆನ್‌ಲೈನ್‌ ವ್ಯವಸ್ಥೆಯಲ್ಲಿ ಸಹ ಅಡ್ಡದಾರಿಗಳನ್ನು ಹುಡುಕಿ, ಪುನಃ ತಮ್ಮ ಬಳಿಯೇ ಬರಬೇಕೆಂಬ ಕಾರಣಕ್ಕೆ ಇಲಾಖೆ ಅಧಿಕಾರಿಗಳು ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಅಧಿಕಾರಿಗಳನ್ನು ಭೇಟಿ ಮಾಡಿದವರಿಗೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಂಸ್ಕೃತಿಕ ಸಂಸ್ಥೆಯೊಂದರ ಮುಖ್ಯಸ್ಥರು ಬೇಸರ ವ್ಯಕ್ತಪಡಿಸಿದರು. 

‘ಸಾಂಸ್ಕೃತಿಕ ನೀತಿಯಲ್ಲಿ ಸಹ ಧನಸಹಾಯ ನೀಡಬೇಕೆಂದು ತಿಳಿ ಸಲಾಗಿದೆ. ಈಗಾಗಲೇ ವಿಳಂಬವಾಗಿದ್ದು, ಸಂಘ–ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಅಧಿಕಾರಿಗಳು ಇದರ ಗಂಭೀರತೆಯನ್ನು ಅರಿತು, ಕೂಡಲೇ ಬಿಡುಗಡೆ ಮಾಡ ಬೇಕು’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ತಿಳಿಸಿದರು.

**

ಧನಸಹಾಯ ವಿಳಂಬವಾಗುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ₹ 2 ಲಕ್ಷ ದೊಳಗಿನ ಅನುದಾನವನ್ನು ಇಲಾಖೆಯಿಂದಲೇ ನೇರವಾಗಿ ಆರ್‌ಟಿಜಿಎಸ್‌ ಮಾಡಬೇಕು. ಅಧಿಕಾರಿಗಳಿಂದ ಮಾಹಿತಿ ಪಡೆಯುವೆ
–ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ಪ್ರತಿಕ್ರಿಯಿಸಿ (+)