ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷ್ಕರಣೆಯಾಗದ ಸಾಂಸ್ಕೃತಿಕ ಅಕಾಡೆಮಿಗಳ ಜಾಲತಾಣ: ಮಾಜಿಗಳೇ ಹಾಲಿ ಅಧ್ಯಕ್ಷರು!

ಫಾಲೋ ಮಾಡಿ
Comments

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿನ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಅಧಿಕಾರಾವಧಿ ಮುಗಿದು ತಿಂಗಳಾಗುತ್ತಾ ಬಂದರೂ ಜಾಲತಾಣಗಳಲ್ಲಿ ಮಾತ್ರ ಅವರೇ ಅಧ್ಯಕ್ಷರಾಗಿ ಉಳಿದಿದ್ದಾರೆ.

ನಾಟಕ, ಸಾಹಿತ್ಯ ಸೇರಿ ವಿವಿಧ ಅಕಾಡೆಮಿಗಳ ಅಧ್ಯಕ್ಷರ ಹಾಗೂ ಸದಸ್ಯರ ಮೂರು ವರ್ಷದ ಅಧಿಕಾರವಧಿ ಕಳೆದ ತಿಂಗಳೇ ಅಂತ್ಯವಾಗಿದೆ. ಆದ್ದರಿಂದ ಸರ್ಕಾರವು ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿ, ಆದೇಶ ಹೊರಡಿಸಿತ್ತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರ ಅಧಿಕಾರಾವಧಿ ವರ್ಷ ಕಳೆಯದಿದ್ದರೂ ಅವರ ನೇಮಕಾತಿಯನ್ನು ರದ್ದುಗೊಳಿಸಿ,ಅವರ ಸ್ಥಾನಕ್ಕೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಆದರೆ, ಅಕಾಡೆಮಿಗಳ ವೆಬ್‌ಸೈಟ್‌ಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಪರಿಷ್ಕರಿಸಿಲ್ಲ. ಇದರಿಂದಾಗಿ ಅಧ್ಯಕ್ಷರುಗಳ ಅಧಿಕಾರಾವಧಿ ಮುಗಿದರೂ ಜಾಲತಾಣಗಳಲ್ಲಿ ಅವರೇ ಹಾಲಿ ಅಧ್ಯಕ್ಷರಾಗಿ ಉಳಿದಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣದಲ್ಲಿ ಬಿ.ವಿ. ವಸಂತಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಜಾಲತಾಣದಲ್ಲಿ ಡಿ. ಮಹೇಂದ್ರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಜಾಲತಾಣದಲ್ಲಿ ಆನೂರು ಅನಂತಕೃಷ್ಣ ಶರ್ಮಾ, ಕರ್ನಾಟಕ ಜಾನಪದ ಅಕಾಡೆಮಿ ಜಾಲತಾಣದಲ್ಲಿಮಂಜಮ್ಮ ಜೋಗತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಜಾಲತಾಣದಲ್ಲಿ ಅಜಕ್ಕಳ ಗಿರೀಶ್ ಭಟ್ ಸೇರಿ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಜಾಲತಾಣದಲ್ಲಿ ಹಳೆಯ ಕಾರ್ಯಕಾರಿ ಸಮಿತಿಯ ವಿವರವನ್ನು ಹಾಗೇ ಉಳಿಸಲಾಗಿದೆ. ಇದು ಕಲಾವಿದರು ಹಾಗೂ ಜನಸಾಮಾನ್ಯರ ಗೊಂದಲಕ್ಕೆ ಕಾರಣವಾಗಿದೆ.

ಜಾಲತಾಣ ಹೊಂದಿಲ್ಲ:ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಜಾಲತಾಣದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಮಾಹಿತಿಯನ್ನು ಈ ಮೊದಲು ದಾಖಲಿಸಿರಲಿಲ್ಲ. ಆದ್ದರಿಂದ ಈ ಬಗ್ಗೆ ವಿವರ ಸಿಗುವುದಿಲ್ಲ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ,ಕರ್ನಾಟಕ ಬಯಲಾಟ ಅಕಾಡೆಮಿ ಸೇರಿ ಕೆಲ ಅಕಾಡೆಮಿಗಳು ಜಾಲತಾಣ ಹೊಂದಿಲ್ಲ. ಇದರಿಂದ ಕಲಾವಿದರಿಗೆ ಅಕಾಡೆಮಿಗಳ ಯೋಜನೆಗಳು, ಅರ್ಜಿ ಆಹ್ವಾನ ಸೇರಿ ವಿವಿಧ ಮಾಹಿತಿಗಳು ಕಾಲ ಕಾಲಕ್ಕೆ ದೊರೆಯದಂತಾಗಿದೆ.

‘ನಮ್ಮ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಮುಗಿದಿದೆ. ಅಕಾಡೆಮಿಯ ಜಾಲತಾಣ ಪರಿಷ್ಕರಣೆ ಆಗದಿರುವುದನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಬಿ.ವಿ. ವಸಂತಕುಮಾರ್
ತಿಳಿಸಿದರು.

‘ಇಲಾಖೆ ವ್ಯಾಪ್ತಿಯ ಜಾಲತಾಣಗಳು ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ ಎಂಬ ದೂರುಗಳು ಮೊದಲಿನಿಂದಲೂ ಇವೆ. ಕಾಲಕಾಲಕ್ಕೆ ಮಾಹಿತಿಯನ್ನೂ ಪರಿಷ್ಕರಣೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಈ ಹಿಂದಿನ ಕಾರ್ಯಕಾರಿ ಸಮಿತಿಯ ವಿವರ ಹಾಗೇ ಉಳಿದಿದೆ. ಸಂಬಂಧಪಟ್ಟವರ ಗಮನಕ್ಕೆ ತಂದು, ದೋಷವನ್ನು ಸರಿಪಡಿಸಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಇಲಾಖೆ ನಿರ್ದೇಶಕ ಪ್ರಕಾಶ್ ನಿಟ್ಟಾಲಿ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಿಷ್ಕರಣೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ಅಧಿಕಾರಾವಧಿಯು 2022ರ ಅ.14ರಂದು ಮುಕ್ತಾಯಗೊಂಡಿದೆ. ಹೊಸ ಅಧ್ಯಕ್ಷರ ನೇಮಕದವರೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪ್ರಾಧಿಕಾರದ ಜಾಲತಾಣದಲ್ಲಿ ಮಾಹಿತಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಅಧ್ಯಕ್ಷರ ಮಾಹಿತಿಯಲ್ಲಿಸುನಿಲ್ ಕುಮಾರ್ ಅವರ ವಿವರ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT