ಬುಧವಾರ, ಆಗಸ್ಟ್ 10, 2022
23 °C
ಸಾಮರಸ್ಯ ಹದಗೆಡುವ ಸಾಧ್ಯತೆ: ಕನ್ನಡ ಗೆಳೆಯರ ಬಳಗ ಕಳವಳ

ಅನ್ಯ ಭಾಷೆಗೆ ನಿಗಮ: ಡಿಸಿಎಂ ಹೇಳಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿಗೊಂದು ನಿಗಮ, ಪ್ರಾಧಿಕಾರಗಳನ್ನು ರಚನೆ ಮಾಡುತ್ತಿರುವ ಸರ್ಕಾರದ ನಿಲುವು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು, ಇದರಿಂದ ಸಮಾಜದ ಸಾಮರಸ್ಯ ಹದಗೆಡುವ ಸಾಧ್ಯತೆಯಿದೆ’ ಎಂದು ಕನ್ನಡ ಗೆಳೆಯರ ಬಳಗವು ಕಳವಳ ವ್ಯಕ್ತಪಡಿಸಿದೆ

‘ತೆಲುಗು–ತಮಿಳಿಗೂ ಅಭಿವೃದ್ಧಿ ನಿಗಮ ತಪ್ಪಲ್ಲ’ ಎಂಬ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಹೇಳಿಕೆಯನ್ನು ಖಂಡಿಸಿರುವ ಬಳಗವು, ‘ಮರಾಠ ಜನಾಂಗಕ್ಕೆ ನೀಡಿರುವ ನಿಗಮಕ್ಕೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ತೆಲುಗು– ತಮಿಳಿಗೂ ಅಭಿವೃದ್ಧಿ ನಿಗಮ ತಪ್ಪಲ್ಲ ಎಂದು ಹೇಳಿರುವುದು ಅಪಾಯಕಾರಿ. ಸಮಾಜದ ಸ್ವಾಸ್ಥ್ಯ ಕಾಪಾಡುವವರು ಇಂತಹ ಬೇಜವಬ್ದಾರಿ ಹೇಳಿಕೆಯನ್ನು ನೀಡಬಾರದು’ ಎಂದು ತಿಳಿಸಿದೆ. 

‘ಜಾತಿಗೊಂದು ನಿಗಮ ಪರಂ‍ಪರೆ ಆರಂಭವಾದದ್ದು 2008ರಲ್ಲಿ. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ಜಾತಿ ಆಧಾರಿತ ನಿಗಮಗಳ ಪರಂಪರೆಯನ್ನು ಮುಂದುವರಿಸಿತು. ರಾಜಕೀಯ ಪಕ್ಷಗಳ ನಡೆಯಲ್ಲಿ ಲಾಭದ ಸ್ವಾರ್ಥವಿದೆಯೇ ವಿನಃ ಜನರ ಅಭ್ಯುದಯದ ಉದ್ದೇಶವಿಲ್ಲ. ಈ ಜಾತಿ ನಿಗಮಗಳ ಬದಲಾಗಿ ಎಲ್ಲ ಸಮಾಜ, ಜಾತಿಗಳಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ. ಈಗಾಗಲೇ ಅನೇಕ ನಿಗಮ ಮಂಡಳಿಗಳು ಅನುದಾನದ ಕೊರತೆಯಿಂದ ನಲುಗುತ್ತಿವೆ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.