ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಬಿಡಿಸುವ ಚಿತ್ರಗಳನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು –.ಎಂ.ಎಸ್‌.ಮೂರ್ತಿ

Last Updated 30 ನವೆಂಬರ್ 2022, 10:01 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳು ಬಿಡಿಸುವ ಚಿತ್ರಗಳನ್ನು ಪೋಷಕರು ಗಂಭೀರವಾಗಿ ಓದಿ ಅರ್ಥಮಾಡಿಕೊಳ್ಳಬೇಕು’ ಎಂದು ಅಂತರರಾಷ್ಟ್ರೀಯ ಚಿತ್ರ ಕಲಾವಿದ, ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಎಸ್‌.ಮೂರ್ತಿ ಹೇಳಿದರು.

ಮುಳಿಯ ಪ್ರತಿಷ್ಠಾನದ ವತಿಯಿಂದ ನಗರದ ಮಣಿಪಾಲ್‌ ಸೆಂಟರ್‌ನಲ್ಲಿರುವ ಮುಳಿಯ ಜುವೆಲ್ಸ್‌ ಆವರಣದಲ್ಲಿ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ‘ಕನ್ನಡ ಚಿತ್ತಾರ’ ಚಿತ್ರ ರಚನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದೇಶಗಳಲ್ಲಿ ಮಕ್ಕಳ ಚಿತ್ರ ಕಲೆಯನ್ನು ಓದುವ, ಗಂಭೀರವಾಗಿ ಪರಿಗಣಿಸುವ ವ್ಯವಸ್ಥೆ ಇದೆ. ನಮ್ಮ ದೇಶದಲ್ಲಿ ಇದು ಸ್ಪರ್ಧೆಗಷ್ಟೇ ಸೀಮಿತವಾಗಿಬಿಟ್ಟಿದೆ. ಮಾತನಾಡಲಾಗದ ಮಕ್ಕಳು ತಮ್ಮ ಮನಸ್ಸಿನ ಭಾವನೆಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸಬಹುದು. ಚಿತ್ರಕಲೆ ಸ್ಪರ್ಧಾತೀತವಾಗಿರಬೇಕು. ಮಕ್ಕಳ ಚಿತ್ರಗಳನ್ನು ಸಂಗ್ರಹಿಸಿ ಇಡಬೇಕು. ಇದು ದೇಶದ ದೊಡ್ಡ ಆಸ್ತಿ. ಚಿತ್ರಗಳಲ್ಲಾಗುವ ತಪ್ಪುಗಳಿಗೆ ಮಕ್ಕಳನ್ನು ದೂಷಿಸಬೇಡಿ. ಆ ತಪ್ಪುಗಳು ಪುನರಾವರ್ತನೆ ಆಗದಂತೆ ತಿಳಿಹೇಳಿ’ ಎಂದರು.

ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಮಾತನಾಡಿ, ‘ನಮ್ಮದು ನವೆಂಬರ್‌ ಕನ್ನಡ ಆಗಬಾರದು. ನಂಬರ್‌ ಒನ್‌ ಕನ್ನಡ ಆಗಬೇಕು. ಇಂಗ್ಲಿಷ್ ವ್ಯಾಮೋಹದ ಪರಿಣಾಮವಾಗಿ ನಮ್ಮ ರಸ್ತೆ, ಪ್ರದೇಶಗಳ ಮೂಲ ಹೆಸರನ್ನೂ ಮರೆತುಬಿಟ್ಟಿದ್ದೇವೆ. ಇಂಗ್ಲಿಷ್‌ ಅಕ್ಷರಗಳಲ್ಲಿ ಕರೆಯುತ್ತಿದ್ದೇವೆ. ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಬೆಳೆಸಿ, ಉಳಿಸಬೇಕು. ಕನ್ನಡೇತರರೇ ಕನ್ನಡ ಭಾಷೆಗೆ ಹೆಚ್ಚು ಕೊಡುಗೆ ನೀಡಿದ ಉದಾಹರಣೆಗಳಿರುವಾಗ ನಮ್ಮ ಭಾಷೆಯಲ್ಲಿ ಮಾತನಾಡಲು ಹಿಂಜರಿಕೆ ಬೇಡ. ಸ್ವಾಭಿಮಾನಶೂನ್ಯತೆ ಇರಬಾರದು’ ಎಂದರು.

ಕಾರ್ಯಕ್ರಮ ಸಂಯೋಜಕ, ಮೈ ಅಂತರಾತ್ಮ ಸಂಸ್ಥೆಯ ಸಂಸ್ಥಾಪಕ ವೇಣು ಶರ್ಮ ಮಾತನಾಡಿ, ‘ಕನ್ನಡ ತಾಯಿಯ ಭಾಷೆಯಾಗಬೇಕು. ಮಗುವಿನ ಮನಸ್ಸಿನ, ಮಾತಿನ ಭಾಷೆ ಅದಾಗಬೇಕು. ಕನಸುಗಳು ಕನ್ನಡದಲ್ಲಿ ಅರಳಬೇಕು. ಆ ಕನಸುಗಳ ಮೂರ್ತ ರೂಪವನ್ನು ಚಿತ್ತಾರದಲ್ಲಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾಡು, ನುಡಿ, ಸಂಸ್ಕೃತಿ ಪರಂಪರೆಯ ಕಾಳಜಿಯನ್ನು ಮುಳಿಯ ಪ್ರತಿಷ್ಠಾನ ತಲೆಮಾರುಗಳಿಂದಲೂ ಮೆರೆದಿದೆ. ಅಂತಹ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ’ ಎಂದರು.

ಹಿರಿಯ ಸಾಹಿತಿ ರಂಗಕರ್ಮಿ ನಾ. ದಾಮೋದರ ಶೆಟ್ಟಿ ಮಾತನಾಡಿ, ‘ಮಕ್ಕಳು ಬಿಡಿಸಿದ ಚಿತ್ರಗಳು ಸ್ವಚ್ಛಂದವಾಗಿರುತ್ತವೆ. ಅವರ ಮನಸ್ಸಿನಲ್ಲಿ ಬಂದ ವಿಚಾರಗಳನ್ನು ಖಾಲಿ ಹಾಳೆಯ ಮೇಲೆ ಮೂಡಿಸುತ್ತಾರೆ. ಎಲ್ಲ ಚಿತ್ರಗಳೂ ಅವರ ಮನಸ್ಸಿನ ಹಾಗೆಯೇ ಸುಂದರವಾಗಿರುತ್ತವೆ’ ಎಂದರು.

ಮುಳಿಯ ಜ್ಯುವೆಲ್ಸ್‌ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್‌ ಸ್ವಾಗತಿಸಿದರು. ಮುಳಿಯ ಜ್ಯುವೆಲ್ಸ್‌ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಶ್ಯಾಮ ಮೂರ್ತಿ ಇದ್ದರು.

ಕನ್ನಡ ಮಾತಾಡಿ ಕ್ಯುಆರ್‌ ಕೋಡ್‌ ಬಿಡುಗಡೆ: ಕನಕಪುರ ರಸ್ತೆ ಕನ್ನಡ ಬಳಗ ಹಾಗೂ ಸ್ಲೇಟು ಬಳಪ ಸಂಸ್ಥೆಯ ಸಂಸ್ಥಾಪಕಿ ಭಾರ್ಗವಿ ಹೇಮಂತ್‌ ಅವರು ರೂಪಿಸಿದ ಸಂವಹನ ಕನ್ನಡ ವಾಕ್ಯಗಳ ಡಿಜಿಟಲ್‌ ವೇದಿಕೆ ‘ಸ್ಕ್ಯಾನ್‌ ಮಾಡಿ ಕನ್ನಡ ಮಾತಾಡಿ’ ಪರಿಕಲ್ಪನೆಯ ಕ್ಯುಆರ್‌ ಕೋಡನ್ನು ಡಾ.ಎಂ.ಎಸ್‌.ಮೂರ್ತಿ ಬಿಡುಗಡೆ ಮಾಡಿದರು.

ಮೊಬೈಲ್‌ನಲ್ಲಿ ಈ ಕ್ಯುಆರ್‌ ಕೋಡನ್ನು ಸ್ಕ್ಯಾನ್‌ ಮಾಡಿದರೆ ಸ್ಲೇಟು ಬಳಪ ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ ಸಂವಹನ ಕನ್ನಡದ ಪುಟಕ್ಕೆ ಭೇಟಿ ನೀಡಬಹುದು. ನಿಮಗೆ ಬೇಕಾದ ಸಂವಹನ ಪ್ರಕಾರವನ್ನು ಆಯ್ಕೆ ಮಾಡಿ ಕನ್ನಡದಲ್ಲಿ ಮಾತು ಕಲಿಯಬಹುದು ಎಂದು ಭಾರ್ಗವಿ ಹೇಳಿದರು.

ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌, ‘ಕಲಾ ಕ್ಷೇತ್ರದಲ್ಲಿ ದುಡಿಯುವವರಿಗೆ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ವೈದ್ಯ, ಎಂಜಿನಿಯರ್‌ಗಳ ಆಚೆಗೂ ಜಗತ್ತಿನಲ್ಲಿ ಬದುಕು ಇದೆ. ಹಾಗಾಗಿ ಪೋಷಕರು ಚಿತ್ರಕಲೆಯನ್ನು ಪ್ರೋತ್ಸಾಹಿಸಬೇಕು. ಬಿಡುವಿನ ವೇಳೆಯಲ್ಲಿ ಯಾರು ಬೇಕಾದರೂ ಚಿತ್ರ ಕಲೆ ಅಭ್ಯಾಸ ಮಾಡಬಹುದು. ಪರಿಷತ್‌ ಆಶ್ರಯದಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾ ಕ್ಷೇತ್ರದ ಅಗಾಧತೆಯನ್ನು ಆಸ್ವಾದಿಸಬಹುದು’ ಎಂದರು.

ಬಿಜಿಎಸ್‌ ಇಂಟರ್‌ನ್ಯಾಷನಲ್‌ ಅಕಾಡೆಮಿಯಾ ಸ್ಕೂಲ್‌ನ ಪ್ರಾಂಶುಪಾಲ ಮಧುಸೂದನ ಸುಣ್ಣಂಬಳ ಮಾತನಾಡಿ, ‘ಭಾಷೆ ಪರಸ್ಪರರನ್ನು ಒಗ್ಗೂಡಿಸುತ್ತದೆ. ಇಂಥ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಒಟ್ಟುಗೂಡಿಸಲು ಸುಲಭ. ಇಂದು ಗೂಗಲ್‌ನಿಂದ ಆಚೆಗಿನ ಜ್ಞಾನ ಬೋಧಿಸುವ ಕೆಲಸ ಆಗಬೇಕಿದೆ. ಅದು ಶಿಕ್ಷಕರ ಜವಾಬ್ದಾರಿಯೂ ಹೌದು. ಅಂಥವರು ಒಳ್ಳೆಯ ಶಿಕ್ಷಕರು ಎನಿಸಿಕೊಳ್ಳುತ್ತಾರೆ. ತಂತ್ರಜ್ಞಾನ ನಮ್ಮನ್ನು ದೂರ ಮಾಡುತ್ತಿರುವ ಹೊತ್ತಿನಲ್ಲಿ ಈ ರೀತಿ ಒಂದಾಗಿಸುವ ಕೆಲಸ ಹೆಚ್ಚು ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT