ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರೋಜಿನಿ ಮಹಿಷಿ ವರದಿಗೆ ಕಾನೂನು ಬೆಂಬಲ ನೀಡಿ: ಸಿಎಂಗೆ ಬಿಳಿಮಲೆ ಒತ್ತಾಯ

ಮುಖ್ಯಮಂತ್ರಿಗೆ ಬಿಳಿಮಲೆ ಒತ್ತಾಯ
Published : 19 ಸೆಪ್ಟೆಂಬರ್ 2024, 15:45 IST
Last Updated : 19 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿರುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಆದಷ್ಟು ಶೀಘ್ರ ಕಾನೂನು ಬೆಂಬಲ ಒದಗಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿದ ಅವರು ಮನವಿ ಸಲ್ಲಿಸಿದರು. ‘ಕನ್ನಡದ ಉಳಿವಿನ ದೃಷ್ಟಿಯಿಂದ ಇದು ಮಹತ್ವದ ವರದಿಯಾಗಿದೆ. ಈ ವರದಿಯಲ್ಲಿ ಖಾಸಗಿ ವಲಯದ ವಿವಿಧ ವರ್ಗಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ, ರಾಜ್ಯದಲ್ಲಿ ವ್ಯವಹರಿಸುವ ಬ್ಯಾಂಕ್‌ನಲ್ಲಿ ನೇಮಕ ಹೊಂದುವ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆಯ ಷರತ್ತು, ಸರ್ಕಾರಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ, ಅಪ್ರೆಂಟಿಸ್, ಕಾರ್ಮಿಕರು, ಗುತ್ತಿಗೆ ಹಾಗೂ ದಿನಗೂಲಿ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ ಒದಗಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ವರದಿಗೆ ಕಾನೂನು ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.  

‘ಈ ವರದಿಯನ್ನು ಗಮನಿಸಿ ಇದೇ ಮಾದರಿಯಲ್ಲಿ ಕೆಲವು ರಾಜ್ಯಗಳು ಕಾನೂನು ರಚಿಸಿವೆ. ವರದಿಯು ‘ಸ್ಥಳೀಯರಿಗೆ ಉದ್ಯೋಗ’ ಎಂಬುದಕ್ಕೆ ತಾತ್ವಿಕ ನೆಲೆಯನ್ನು ಒದಗಿಸಿತ್ತು. ‘ಸ್ಥಳೀಯರು’ ಎಂದರೆ ಯಾರು ಎಂಬುದಕ್ಕೆ ಖಚಿತ ಮಾಪನವನ್ನು ಅಳವಡಿಸಿ, ರಾಷ್ಟ್ರದ ಗಮನ ಸೆಳೆದಿತ್ತು. ಮಹಿಷಿ ವರದಿಯಲ್ಲಿ ಹೇಳಿರುವ, ‘ಸ್ಥಳೀಯರು ಕನಿಷ್ಠ 15 ವರ್ಷಗಳಿಂದ ನಿವಾಸಿಯಾಗಿರಬೇಕು’ ಎಂಬ ಮಾನದಂಡವನ್ನು ಹಲವು ರಾಜ್ಯಗಳು ಅಳವಡಿಸಿಕೊಂಡಿವೆ’ ಎಂದು ಹೇಳಿದರು.

‘ತಂತ್ರಜ್ಞಾನ ಬೆಳವಣಿಗೆಗೆ ಅನುಗುಣವಾಗಿ ಉದ್ಯೋಗ ತರಬೇತಿಗೆ ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿ ಸ್ಥಾಪನೆ ಬಗ್ಗೆಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ, ಕೇಂದ್ರ ಪಠ್ಯಕ್ರಮ ಶಿಕ್ಷಣದಲ್ಲಿ ಒಂದರಿಂದ 10ನೇ ತರಗತಿಯವರೆಗೆ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸುವಿಕೆ ಸೇರಿದಂತೆ ಒಟ್ಟು 14 ಅನುಷ್ಠಾನ ಯೋಗ್ಯ ಅಂಶಗಳು ಪರಿಷ್ಕೃತ ವರದಿಯಲ್ಲಿದೆ. ಮುಂದಿನ ಅಧಿವೇಶನದಲ್ಲಿ ಪ್ರಾಧಿಕಾರದ ವರದಿಯನ್ನು ಮಂಡಿಸಿ, ರಾಜ್ಯ ಸರ್ಕಾರದ ಕನ್ನಡದ ಬದ್ಧತೆಯನ್ನು ಸ್ಥಿರೀಕರಿಸಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT