ಬುಧವಾರ, ಜನವರಿ 19, 2022
19 °C
ಕ್ಯಾನ್ಸರ್‌ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಕಳವಳ

ಶಸ್ತ್ರಚಿಕಿತ್ಸೆ ವೇಳೆಯೂ ಮೊಬೈಲ್ ಬಳಕೆ ಸರಿಯಲ್ಲ: ಡಾ. ವಿಜಯಲಕ್ಷ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ವಲಯವೂ ಇದಕ್ಕೆ ಹೊರತಾಗಿಲ್ಲ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಮೊಬೈಲ್ ಬಳಕೆ ಮಾಡುತ್ತಿರುವುದು ಸರಿಯಲ್ಲ’ ಎಂದು ಕ್ಯಾನ್ಸರ್‌ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ತಿಳಿಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ‘ವೈದ್ಯಕೀಯ ವಲಯದಲ್ಲಿ ಕನ್ನಡ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು. ‘ರೋಗಿಗಳಿಗೆ ಚಿಕಿತ್ಸೆಯನ್ನು ಒತ್ತಾಯಪೂರ್ವಕವಾಗಿ ನೀಡಬಾರದು. ಚಿಕಿತ್ಸೆ ನೀಡುವ ಮೊದಲು ಅನುಸರಿಸುವ ವಿಧಾನ ಮತ್ತು ಮಹತ್ವದ ಬಗ್ಗೆ ಮನವರಿಕೆ ಮಾಡಿಸಬೇಕು. ಕೋವಿಡ್ ಕಾಣಿಸಿಕೊಂಡ ಬಳಿಕ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದೆ’ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಎನ್.ಎಮ್. ನಾಗರಾಜ್, ‘ವೈದ್ಯಕೀಯ ವಲಯದಲ್ಲೂ ಕನ್ನಡದ ಬಳಕೆ ಹೆಚ್ಚಬೇಕು. ಕೋಟ್ಯಂತರ ಜನರ ಮಾತೃಭಾಷೆಯಾಗಿರುವ ಕನ್ನಡದಲ್ಲಿಯೂ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು. ಅನಾರೋಗ್ಯ ಸಮಸ್ಯೆಗಳನ್ನು ನಿರ್ಣಯಿಸುವಲ್ಲಿ ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ವೈದ್ಯರು ತಮ್ಮ ಕಾರ್ಯಕ್ಷೇತ್ರದಲ್ಲಿ ರೋಗಿಗಳ ಮಾತೃಭಾಷೆ ಬಳಸಿದಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ‘ವೈದ್ಯಕೀಯ ಕ್ಷೇತ್ರವು ನಾಳೆಗಳ ಮೇಲೆ ನಂಬಿಕೆ ಮೂಡಿಸುತ್ತದೆ. ಈ ಕ್ಷೇತ್ರ ಜನಸ್ನೇಹಿಯಾದರೆ ಮಾತ್ರ ಯಶಸ್ವಿಯಾಗಲಿದೆ. ವೈದ್ಯರು ರೋಗಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಹನ ನಡೆಸಬೇಕು’ ಎಂದರು.

‘ವೈದ್ಯಕೀಯ ಡಿಪ್ಲೊಮಾದಲ್ಲಿ ಕನ್ನಡ’

‘ಇಂಗ್ಲಿಷ್-ಕನ್ನಡ ವೈದ್ಯಕೀಯ ಪದಕೋಶಗಳು ರಚನೆಯಾಗಬೇಕು. ಅನ್ಯ ರಾಜ್ಯದವರು ಹೆಚ್ಚಾಗಿ ಇಲ್ಲಿ ನರ್ಸಿಂಗ್ ಕೋರ್ಸ್‌ಗಳನ್ನು ಅಭ್ಯಸಿಸುತ್ತಿದ್ದಾರೆ. ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಕಲಿಯುವ ಅವರು, ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗಿ ರಾಜ್ಯದಲ್ಲಿ ಶುಶ್ರೂಷಕರ ಕೊರತೆಯಾಗುತ್ತಿದೆ. ಹೀಗಾಗಿ, ಕನ್ನಡದಲ್ಲಿಯೇ ಅರೆ ವೈದ್ಯಕೀಯ ಕೋರ್ಸ್‌ಗಳು ಹಾಗೂ ಡಿಪ್ಲೊಮಾ ಮಟ್ಟದಲ್ಲಿ ಕನ್ನಡ ಶಿಕ್ಷಣ ನೀಡುವ ಸಾಧ್ಯತೆಯ ಬಗ್ಗೆ ವಿಶ್ವವಿದ್ಯಾಲಯ ಚಿಂತನೆ ನಡೆಸುತ್ತಿದೆ’ ಎಂದು ಎನ್.ಎಮ್. ನಾಗರಾಜ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು