ಭಾನುವಾರ, ಜೂನ್ 26, 2022
27 °C
ಪ್ರಗತಿ ಪರಿಶೀಲನೆ ಸಭೆಯಲ್ಲಿ ನಾಗಾಭರಣ ಅಸಮಾಧಾನ

ಬಿಡಿಎ: ಕನ್ನಡ ಅನುಷ್ಠಾನದಲ್ಲಿ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರಿಂಗ್ ವಿಭಾಗ ಮತ್ತು ನಗರ ಯೋಜನೆ ವಿಭಾಗದಲ್ಲಿ ಕೆಲವು ಟಿಪ್ಪಣಿಗಳು, ಪತ್ರ ವ್ಯವಹಾರಗಳು, ದರ ಪಟ್ಟಿ, ಅಂದಾಜು ಪಟ್ಟಿಗಳು ಇಂಗ್ಲಿಷ್‌ನಲ್ಲಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಡಿಎ ಆಯುಕ್ತರ ಕಚೇರಿ ಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಬಿಡಿಎ ಅಧಿಕಾರಿಗಳಿಂದ ಕನ್ನಡ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದುಕೊಂಡರು. ‘ಇಂಗ್ಲಿಷ್‌ನಲ್ಲಿರುವ ದರಪಟ್ಟಿ, ಅಂದಾಜುಪಟ್ಟಿಗಳು ಸೇರಿದಂತೆ ವಿವಿಧ ದಾಖಲಾತಿಗಳನ್ನು ಶೀಘ್ರವೇ ಕನ್ನಡಕ್ಕೆ ಅನುವಾದ ಮಾಡಿ, ಇವುಗಳು ಕನ್ನಡದಲ್ಲಿಯೇ ಇರುವಂತೆ ಸಂಬಂಧಪಟ್ಟವರಿಗೆ ಆದೇಶಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಇಂಗ್ಲಿಷ್‌ನಲ್ಲಿ ಜಾಹೀರಾತು ನೀಡಿರುವ ಬಗ್ಗೆ ಪ್ರಾಧಿಕಾರ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಪುನಃ ಕನ್ನಡದ ದಿನಪತ್ರಿಕೆಗಳಲ್ಲೀ ಇಂಗ್ಲಿಷ್‌ನಲ್ಲೇ ಜಾಹೀರಾತು ನೀಡುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿ ನಡೆ. ಜಾಹೀರಾತುಗಳು, ನಾಮಫಲಕಗಳು, ನಕ್ಷೆಗಳು, ರಶೀದಿಗಳು, ನಿವೇಶನ ಹಂಚಿಕೆಯ ಆದೇಶಗಳು, ಸೇವಾ ಸಿಂಧು ಸಕಾಲ ಅರ್ಜಿ ನಮೂನೆಗಳು, ಬಿಡಿಎ ನೀತಿಗಳು ಇಂಗ್ಲಿಷ್‌ನಲ್ಲಿಯೇ ಇವೆ. ಇದನ್ನು ಕೂಡಲೇ ತಿದ್ದುಪಡಿ ಮಾಡಬೇಕು. 15 ದಿನಗಳಲ್ಲಿ ಸಂಪೂರ್ಣವಾಗಿ ಕನ್ನಡ ಅನುಷ್ಠಾನಗೊಳಿಸಿ, ವರದಿಯನ್ನು ಪ್ರಾಧಿಕಾರಕ್ಕೆ ಕಳುಹಿಸಬೇಕು’ ಎಂದು ಆದೇಶಿಸಿದರು.

‘ಬಿಡಿಎ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಅಧಿಕಾರಿಗಳು ಜಂಟಿಯಾಗಿ ಕನ್ನಡ ಅನುಷ್ಠಾನಕ್ಕೆ ಯೋಜನೆ ಸಿದ್ಧಪಡಿಸಬೇಕು’ ಎಂದರು.

‘ಕಾಲಕಾಲಕ್ಕೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಮಾಡಿ, ಸಲಹೆ ಸೂಚನೆಗಳನ್ನು ನೀಡಿದ್ದರೂ ತಂತ್ರಾಂಶದಲ್ಲಿ ಕನ್ನಡ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಸಾಮಾಜಿಕ ಜಾಲತಾಣ, ಆ್ಯಪ್‌ಗಳು ಮತ್ತು ಸಂದೇಶಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು’ ಎಂದು ಸೂಚಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು