ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ–ಕಾಲೇಜುಗಳಲ್ಲಿ ‘ಸೌಹಾರ್ದ ಸಂಸ್ಕೃತಿ’

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಯೋಜನೆ * ನೂರು ಪುಸ್ತಕಗಳನ್ನು ಪ್ರಕಟಿಸಿ ವಿತರಣೆ
Published : 12 ಆಗಸ್ಟ್ 2024, 23:53 IST
Last Updated : 12 ಆಗಸ್ಟ್ 2024, 23:53 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದ ಶಾಲಾ–ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಪರಸ್ಪರ ಸೌಹಾರ್ದ ಮೂಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ. ಇದಕ್ಕಾಗಿ ಪುಸ್ತಕಗಳನ್ನು ಪ್ರಕಟಿಸಿ ವಿತರಿಸುವ ಜತೆಗೆ ಸೌಹಾರ್ದ ಸಮಾವೇಶಗಳನ್ನು ಹಮ್ಮಿಕೊಳ್ಳಲು ಕಾರ್ಯಯೋಜನೆ ರೂಪಿಸಿದೆ. 

‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಪರಿಕಲ್ಪನೆಯಡಿ ಈ ಯೋಜನೆಯನ್ನು ಪ್ರಾಧಿಕಾರ ಹಮ್ಮಿಕೊಂಡಿದೆ. ಕರ್ನಾಟಕ ಸಂಸ್ಕೃತಿಯಲ್ಲಿ ಬೇರೆ ಬೇರೆ ಸಮುದಾಯದವರು, ಧರ್ಮದವರು ಒಟ್ಟಿಗೆ ಬದುಕಿರುವುದು ಹಾಗೂ ಅವರು ನೀಡಿದ ಕೊಡುಗೆಗಳನ್ನು ತಿಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.

‘ಕರ್ನಾಟಕ ಸೌಹಾರ್ದ ಸಂಸ್ಕೃತಿ’ ಮಾಲಿಕೆಯಡಿ ತಲಾ 72 ಪುಟಗಳ ನೂರು ಪುಸ್ತಕಗಳನ್ನು ಪ್ರಕಟಿಸಲು ಪ್ರಾಧಿಕಾರ ಮುಂದಾಗಿದೆ. ಈ ಪುಸ್ತಕಗಳನ್ನು ತಲಾ ₹10ಕ್ಕೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಿದೆ. ಇದಕ್ಕೆ ‍ಪೂರಕವಾಗಿ ರಾಜ್ಯದ ವಿವಿಧೆಡೆ ಉಪನ್ಯಾಸ ಹಾಗೂ ಸೌಹಾರ್ದ ಸಮಾವೇಶವನ್ನೂ ಹಮ್ಮಿಕೊಳ್ಳಲು ನಿರ್ಧರಿಸಿದೆ.

ಮೈಲಾರಲಿಂಗ ಸೇರಿ ವಿವಿಧ ಮಹಾ ಪುರುಷರು, ಮಲೆ ಮಹದೇಶ್ವರ ಬೆಟ್ಟ, ಮೇಲುಕೋಟೆ ಸೇರಿ ಹಲವು ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರಾಧಿಕಾರವು ಪುಸ್ತಕ ಪ್ರಕಟಿಸಲಿದೆ. ಇದರ ಜತೆಗೆ ಜೈನ, ಬೌದ್ಧ ಸೇರಿ ವಿವಿಧ ಧರ್ಮಗಳು ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆಯೂ ಪುಸ್ತಕಗಳನ್ನು ಹೊರತರಲಿದೆ.

ಪಿಎಚ್‌.ಡಿ. ಅಭ್ಯರ್ಥಿಗಳ ಬಳಕೆ: ಪುಸ್ತಕಗಳ ಪ್ರಕಟಣೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಪಿಎಚ್‌.ಡಿ. ಅಭ್ಯರ್ಥಿಗಳಿಗೆ ಕಾರ್ಯಾಗಾರ ನಡೆಸಿ, ಬರವಣಿಗೆಗೆ ಸಾಹಿತ್ಯ ಕ್ಷೇತ್ರದ ಪ್ರಮುಖರಿಂದ ಮಾರ್ಗದರ್ಶನ ಒದಗಿಸಲಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಪುಸ್ತಕ ಪ್ರಕಟಣೆ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಪ್ರಾಧಿಕಾರ ಹಮ್ಮಿಕೊಂಡಿದೆ. 

‘ಶಾಲಾ–ಕಾಲೇಜು ಹಂತದಲ್ಲಿಯೇ ಪರಸ್ಪರ ಸೌಹಾರ್ದ ಮೂಡಿಸಬೇಕಿದೆ. ಆದ್ದರಿಂದ ಪುಸ್ತಕ ವಿತರಣೆ ಹಾಗೂ ಸಮಾವೇಶ ನಡೆಸಲು ಯೋಜನೆ ರೂಪಿಸಲಾಗಿದೆ. ಸಂಶೋಧನಾ ಅಭ್ಯರ್ಥಿಗಳಿಂದ ಸರಳ ಭಾಷೆಯಲ್ಲಿ ಪುಸ್ತಕಗಳನ್ನು ಹೊರತರಲಾಗುತ್ತದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕರ್ನಾಟಕ ಹಿಂದೆ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಅದನ್ನು ಹೊಸ ತಲೆಮಾರಿನವರಿಗೆ ತಿಳಿಸಬೇಕಿದೆ. ಆ ಕೆಲಸವನ್ನು ಮಾಡುತ್ತಿದ್ದೇವೆ ।
ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಊರಿನ ಹೆಸರು ಉಳಿಸುವ ಅಭಿಯಾನ
ಮರೆಯಾಗುತ್ತಿರುವ ಊರಿನ ಹೆಸರುಗಳನ್ನು ಉಳಿಸುವ ಅಭಿಯಾನ ಹಮ್ಮಿಕೊಳ್ಳಲು ಪ್ರಾಧಿಕಾರವು ಮುಂದಾಗಿದೆ. ಕನ್ನಡದಲ್ಲಿ ಸುಮಾರು 65 ಸಾವಿರ ಊರಿನ ಹೆಸರುಗಳಿವೆ ಎಂಬುದನ್ನು ಪ್ರಾಧಿಕಾರ ಗುರುತಿಸಿದ್ದು ಆ ಹೆಸರನ್ನು ಶಾಶ್ವತವಾಗಿ ಉಳಿಸಲು ಕ್ರಮವಹಿಸಿದೆ. ಇದಕ್ಕೆ ಎನ್‌ಎಸ್‌ಎಸ್‌ ಘಟಕಗಳಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಿದೆ. ಅವರ ನೆರವಿನಿಂದ ಸರ್ಕಾರಿ ಕಚೇರಿಗಳು ಶಾಲೆಗಳು ಅಂಗಡಿಗಳು ಸೇರಿ ವಿವಿಧೆಡೆ ನಾಮಫಲಕಗಳಲ್ಲಿ ಆಯಾ ಊರುಗಳ ಹೆಸರನ್ನು ಅಳವಡಿಕೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT