ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ತೋರಣದ ಜತೆಗೆ ಹೂರಣವೂ ಬೇಕು: ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಾಗಾರ
Last Updated 30 ಜುಲೈ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡದ ಕಾರ್ಯಕ್ರಮಗಳು ಭಾಷೆಗೆ ತೋರಣಗಳಂತೆ ಕಾಣುತ್ತಿವೆ. ಕನ್ನಡಕ್ಕೆ ತೋರಣದ ಜತೆಗೆ ಹೂರಣವೂ ಬೇಕಿದೆ’ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶುಕ್ರವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾಷೆಗೆ ಇನ್ನಷ್ಟು ಹೂರಣ ತುಂಬುವ ಕೆಲಸ ಆಗಬೇಕಿದೆ. ಸರ್ಕಾರದ ಆದೇಶ ಅಥವಾ ಒತ್ತಾಯಗಳಿಂದ ಕನ್ನಡ ಕಲಿಸಲು ಆಗುವುದಿಲ್ಲ. ಜನರ ಹೃದಯದಲ್ಲಿ ಕನ್ನಡ ಕಲಿಯುವ ಇಚ್ಛೆ ಮೂಡಬೇಕು. ಸಾಹಿತಿಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. ಹೀಗೆ ರಚಿತಗೊಂಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ಜೀವನ ಮಾರ್ಗಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಮುಂದಾಗುತ್ತಿದ್ದಾರೆ. ಕನ್ನಡದಿಂದಲೂ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಪೋಷಕರಿಗೆ ಅರ್ಥ ಮಾಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೊಂದು ಕನ್ನಡ ಮಾಧ್ಯಮ ಮಾದರಿ ಶಾಲೆಯನ್ನು ಸರ್ಕಾರ ತೆರೆಯಬೇಕು. ತಾಂತ್ರಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಬೇಕು. ಆಗ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಾರೆ’ ಎಂದರು.

ನಟ ಸುಚೇಂದ್ರ ಪ್ರಸಾದ್, ‘ಅಭಿವೃದ್ಧಿ ಪ್ರಾಧಿಕಾರವು ಜಾಗೃತಿ ಸಮಿತಿಗಳನ್ನು ರಚಿಸಿದಾಗಲೇ ಕನ್ನಡಿಗರು ಜಾಗೃತಗೊಳ್ಳಬೇಕಿತ್ತು. ಇದಾಗದಿರುವುದು ದುರದೃಷ್ಟಕರ. ಭಾಷೆ ಉಳಿಸಿ ಬೆಳೆಸಲು ಬದ್ಧತೆಯ ಕೆಲಸಗಳನ್ನು ಮರೆತು ಅಧಿಕಾರದ ಗಾದಿಗಾಗಿ ಹೆಚ್ಚಿನವರು ಮುಗಿ ಬೀಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ‘ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡದ ಕಾವಲು ಪಡೆಯಂತೆ ಕೆಲಸ ಮಾಡಬೇಕು. ಆಶಯಗಳನ್ನು ಗುರುತಿಸಿಕೊಂಡು ಕನ್ನಡದ ಕೆಲಸ ಮಾಡಬೇಕು’ ಎಂದರು.

‘ಆಡಳಿತ ಭಾಷೆಯಾಗಿ ಬೆಳೆಯಬೇಕು’

‘ಮಾತೃಭಾಷೆಯ ‌ಬದಲಿಗೆ ಆಡಳಿತ ಭಾಷೆಯಾಗಿ ಕನ್ನಡ ಹೆಚ್ಚು ಅನುಷ್ಠಾನಗೊಳ್ಳಬೇಕು’ ಎಂದು ಪ್ರಾಧಿಕಾರದ ಸದಸ್ಯ ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷಾ ಅಭಿಪ್ರಾಯಪಟ್ಟರು.

‘ಆಂಧ್ರ ಪ್ರದೇಶ ಸರ್ಕಾರವು ತೆಲುಗು ಭಾಷೆಯನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪರಿಣಾಮಕಾರಿ ಕಲಿಸುತ್ತಿದೆ‌. ಆ ಕೆಲಸ ಕರ್ನಾಟಕದಲ್ಲೂ ಆಗಬೇಕು. ಕನ್ನಡ ಶಾಲೆಗಳನ್ನು ಮುಚ್ಚಿ ನೂರಾರು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು ಬೇಸರದ ಸಂಗತಿ. ಮದರಸಗಳಲ್ಲೂ ಕನ್ನಡ ಕಲಿಸುವ ಕೆಲಸವಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT