ಗುರುವಾರ , ನವೆಂಬರ್ 14, 2019
19 °C
ಪದವಿಪೂರ್ವ ಉಪನ್ಯಾಸಕರ ನೇಮಕಾತಿ–ಕೀ ಉತ್ತರದಲ್ಲಿ ದೋಷ

ಕೆಇಎ: ಕನ್ನಡಕ್ಕೆ ಅನ್ಯಾಯ

Published:
Updated:

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಗಳವಾರ ರಾತ್ರಿ ಪ್ರಕಟಿಸಿದ್ದು, ಕನ್ನಡ ವಿಷಯದಲ್ಲಿ ಆಗಿರುವ ಅನ್ಯಾಯ ಜೀವಂತವಾಗಿ ಸಮಾಧಿಯಾಗುವ ಸಾಧ್ಯತೆ ಕಂಡುಬಂದಿದೆ.

‍ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರ ಸೂಚನೆಯಂತೆ ಕೆಇಎ ಅಂತಿಮ ನೇಮಕಾತಿ ಪಟ್ಟಿಯನ್ನು ಪ್ರಕಟಿಸಿದ್ದು, ಸದ್ಯಕ್ಕೆ ರಾಜ್ಯಶಾಸ್ತ್ರ ಮತ್ತು ಇತಿಹಾಸ ವಿಷಯಗಳನ್ನು ಬಿಟ್ಟು, ಉಳಿದ 20 ವಿಷಯಗಳಲ್ಲಿನ ಅಂತಿಮ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಲಾಗಿದೆ.

‘ನೇಮಕಾತಿಗಾಗಿ ನಡೆದ ಪರೀಕ್ಷೆಯ ಕೀ ಉತ್ತರದಲ್ಲಿ ಭಾರಿ ಗೊಂದಲ ಮತ್ತು ತಪ್ಪು ಇದ್ದ ವಿಷಯಗಳಲ್ಲಿ ಕನ್ನಡವೂ ಒಂದಾಗಿತ್ತು. ಹಲವರು ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದು ಇದೇ ವಿಷಯದಲ್ಲಿ. ನಿವೃತ್ತ ಐಎಎಸ್‌ ಅಧಿಕಾರಿ ಬಿ. ಎ. ಹರೀಶ್‌ ಗೌಡ ಅವರು ಪರಿಶೀಲನೆ ನಡೆಸಿ ಕನ್ನಡದಲ್ಲಿ ನಾಲ್ಕು ಉತ್ತರಗಳಿಗೆ ಸರಿ ಉತ್ತರವನ್ನು ನಮೂದಿಸಿ, ಅದರಂತೆ ಅಂಕ ನೀಡಿ ಪಟ್ಟಿ ಪ್ರಕಟಿಸಬಹುದು ಎಂದು ಶಿಫಾರಸು ಮಾಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಈ ತಪ್ಪನ್ನು ಸರಿಪಡಿಸದೆ, ಈ ಮೊದಲು ಪ್ರಕಟಿಸಿದ್ದ ಪಟ್ಟಿಯನ್ನೇ ಯಥಾವತ್ತಾಗಿ ಪ್ರಕಟಿಸಲಾಗಿದೆ. ಅನ್ಯಾಯ ಹಾಗೆಯೇ ಸಮಾಧಿಯಾಗಿದೆ’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ ಈ ಮೂಲಕ ಅದೆಷ್ಟೋ ಮಂದಿಗೆ ಅನ್ಯಾಯ ಮಾಡಿದೆ, ಬದಲಾವಣೆ ಮಾಡದೆ ಹಾಗೆಯೇ ಪ್ರಕಟಿಸುವುದಾದರೆ ಹರೀಶ್‌ ಗೌಡರನ್ನು ಆಗಿರುವ ಅನ್ಯಾಯದ ಬಗ್ಗೆ ಪರಿಶೀಲಿಸಲು ನೇಮಿಸಿದ್ದಾದರೂ ಏಕೆ?’ ಎಂದು ಅವರು ಪ್ರಶ್ನಿಸಿದರು.

ಮೂರು ದಿನಗಳ ಹಿಂದೆ ವಿಧಾನ ಪರಿಷತ್‌ ಸದಸ್ಯ ಕೆ. ಟಿ. ಶ್ರೀಕಂಠೇಗೌಡ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೆ ಮಂಗಳವಾರ ಅವರ ಸೂಚನೆ ಗಮನಿಸಿದರೆ ರಾಜ್ಯಶಾಸ್ತ್ರಕ್ಕೆ ಸಹ ಪರೀಕ್ಷೆ ನಡೆಯುವ ಸಾಧ್ಯತೆ ಕಡಿಮೆ ಇದೆ. ಸಚಿವರ ಸೂಚನೆಯಂತೆ ಒಂದು ವಾರದೊಳಗೆ ರಾಜ್ಯಶಾಸ್ತ್ರ ಮತ್ತು ಇತಿಹಾಸ ವಿಷಯಗಳ ನೇಮಕಾತಿ ಪಟ್ಟಿಯನ್ನೂ ಪ್ರಕಟಿಸಬೇಕಾಗಿದೆ. 

ಪ್ರತಿಕ್ರಿಯಿಸಿ (+)