ಪ್ರತಿನಾಯಕರನ್ನು ಸೃಷ್ಟಿಸುವುದು ವಿಕೃತಿ

7
ವಿಚಾರಸಂಕಿರಣದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ

ಪ್ರತಿನಾಯಕರನ್ನು ಸೃಷ್ಟಿಸುವುದು ವಿಕೃತಿ

Published:
Updated:
ಬೆಂಗಳೂರು ವಿ.ವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಅಶ್ವತ್ಥನಾರಾಯಣ, ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ ಡಾ.ಎಸ್.ಕೆ ಅರುಣಿ, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ, ಇತಿಹಾಸಕಾರ ಎಚ್.ಜಿ ರಾಜೇಶ್ ಮತ್ತು ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು -–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಿನಿಮಾದಲ್ಲಿ ವಿಷ್ಣುವರ್ಧನ್‌–ರಾಜ್‌ಕುಮಾರ್‌, ಸಾಹಿತ್ಯದಲ್ಲಿ ಬೇಂದ್ರೆ–ಕುವೆಂಪು ಹೀಗೆ ಪ್ರತಿನಾಯಕರನ್ನು ಸೃಷ್ಟಿಸಿ ಕೆಲವು ವಿಮರ್ಶಕರು ವಿಕೃತಿ ಅನುಭವಿಸುತ್ತಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು.

ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದ ಸುವರ್ಣ ಸಂಭ್ರಮದ ನೆನಪಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸದ್ಭಾವನಾ ಪ್ರತಿಷ್ಠಾನ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ’ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಟೀಕೆ ಬಂಜಕತನವಾಗಿರಬಾರದು, ಜಗಳ ತಂದಿಟ್ಟು ತಮಾಷೆ ಮಾಡುವಂತೆ ಇರಬಾರದು. ಕುವೆಂಪು, ಆರಂಭದಲ್ಲಿ ಸಾಕಷ್ಟು ವಿಮರ್ಶಕರ ಸವಾಲುಗಳನ್ನು ಎದುರಿಸಿಯೇ ಬೆಳೆದರು. ಆದರೆ, ಅವರ ‘ರಾಮಾಯಣ ದರ್ಶನಂ’ ಕೃತಿ ಮಹಾಕಾವ್ಯ ಹೌದಾ? ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ಬೆಳೆದಿತ್ತು. ಅವರನ್ನು ಕಾದಂಬರಿಕಾರ ಅಷ್ಟೇ. ಬೇಂದ್ರೆ ಮಾತ್ರ ಮಹಾಕವಿ ಎಂದು ವಿಮರ್ಶಕರು ವಿಂಗಡಿಸುತ್ತಿದ್ದರು’ ಎಂದು ಅವರು ವಿಶ್ಲೇಷಿಸಿದರು.

‘ಕುವೆಂಪು ಅವರು ಸಾಮಾಜಿಕ ಅಧ್ಯಾತ್ಮದ ಪರಿಕಲ್ಪನೆಯನ್ನು ನೀಡಿದರು. ಶೂದ್ರ ತಪಸ್ವಿ ಕೃತಿ ಬಂದಾಗ ಇದು ಬ್ರಾಹ್ಮಣ ವಿರೋಧಿ ಎಂದು ಕೆಲವರು ವಿಮರ್ಶಿಸಿದರು. ಮೂರನೇ ಮುದ್ರಣದ ಮುನ್ನುಡಿಯಲ್ಲಿ ಕುವೆಂಪು ಅವರು ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೃತಿ ಯಾರಿಗೂ ಅರ್ಥ ಆಗಿಲ್ಲ. ವಿರೋಧಿಸಿದವರು ಇದು ಬ್ರಾಹ್ಮಣ ವಿರೋಧಿ ಕೃತಿ ಎಂದುಕೊಂಡರು. ಜತೆಗೆ ಹೊಗಳಿದವರು ಕೂಡ ಇದು ಬ್ರಾಹ್ಮಣ ವಿರೋಧಿ ಕೃತಿ ಎಂದುಕೊಂಡೇ ಹೊಗಳಿದ್ದಾರೆ ಎಂಬುದು ಕುವೆಂಪು ವರ ಅಂತರಂಗವಾಗಿತ್ತು’ ಎಂದು ಹೇಳಿದರು.

‘ಭಕ್ತರು ಹಾಗೂ ಬಂಜಕರ ನಡುವಿನ ಕುವೆಂಪು ಸಾಹಿತ್ಯವನ್ನು ಯಾರೂ ಅರ್ಥಮಾಡಿಕೊಂಡಿಲ್ಲ’ ಎಂದು ಅವರು ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !