ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈಲಾ ತಿದ್ದುಪಡಿಗೆ ಸರ್ಕಾರದ ಒಪ್ಪಿಗೆ ದೊರೆತಿದೆ. ಇದರಿಂದ ವಿದೇಶಗಳಲ್ಲಿರುವ ಕನ್ನಡ ಸಂಘಗಳನ್ನು ಅಂಗಸಂಸ್ಥೆಗಳನ್ನಾಗಿ ಮಾಡಿಕೊಳ್ಳಲು ಪರಿಷತ್ತಿಗೆ ಅವಕಾಶ ದೊರೆತಿದೆ.
ಪರಿಷತ್ತಿನ ಬೈಲಾದಲ್ಲಿ ಕೆಲವು ನಿಯಮಗಳಿಗೆ ತಿದ್ದುಪಡಿ ತರಲು ತುಮಕೂರಿನಲ್ಲಿ ಕಳೆದ ಜೂನ್ 22ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ತಿದ್ದುಪಡಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ತಿದ್ದುಪಡಿಗಳನ್ನು ಸಿದ್ಧಪಡಿಸಿಕೊಟ್ಟಿತ್ತು. ಅದರಂತೆ ಪರಿಷತ್ತಿನ ಬೈಲಾ ಸಂಖ್ಯೆ 4ರಿಂದ 10, 17, 18, 20, 22, 24, 27, 32 ಮತ್ತು 33ರನ್ನು ತಿದ್ದುಪಡಿ ಮಾಡಲಾಗಿದೆ.
‘ಈ ತಿದ್ದುಪಡಿಯಿಂದ ವಿದೇಶಿ ಕನ್ನಡ ಸಂಘ–ಸಂಸ್ಥೆಗಳನ್ನು ಪರಿಷತ್ತಿನ ಅಂಗಸಂಸ್ಥೆಗಳನ್ನಾಗಿ ಮಾಡಿಕೊಳ್ಳಬಹುದು. ಕಸಾಪ ವಿದೇಶಿ ಘಟಕಗಳನ್ನು ಸ್ಥಾಪಿಸುವದಕ್ಕಿಂತ ಇದು ಪರಿಣಾಮಕಾರಿಯಾಗಿದ್ದು, ಅಲ್ಲಿನ ಸಂಘ–ಸಂಸ್ಥೆಗಳು ಪರಿಷತ್ತಿನ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಲಿವೆ. ಪರಿಷತ್ತಿನ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಈ ತಿದ್ದುಪಡಿ ನೆರವಾಗಲಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟ 33 ವಿಧಿಯನ್ನು ತಿದ್ದುಪಡಿ ಮಾಡಲಾಗಿದೆ. ಸಮ್ಮೇಳನ ಜರುಗಲಿರುವ ಜಿಲ್ಲೆಯ ಚುನಾಯಿತ ಅಧ್ಯಕ್ಷರ ಸ್ಥಾನ ಯಾವುದೇ ಕಾರಣದಿಂದ ತೆರವಾಗಿದ್ದಲ್ಲಿ ಅಥವಾ ಜಿಲ್ಲಾಧ್ಯಕ್ಷರು ಆರೋಗ್ಯದ ಸಮಸ್ಯೆ ಸೇರಿ ಯಾವುದೇ ಕಾರಣದಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಲ್ಲಿ ಪರಿಷತ್ತಿನ ಕೇಂದ್ರ ಘಟಕದ ಅಧ್ಯಕ್ಷರು ಸಮಿತಿಯನ್ನು ರಚಿಸಿ, ಕ್ರಿಯಾಶೀಲರಾಗಲು ಅವಕಾಶ ದೊರೆಯಲಿದೆ. ಚುನಾಯಿತ ಜಿಲ್ಲಾಧ್ಯಕ್ಷರು, ಗಡಿನಾಡು ಘಟಕದ ಅಧ್ಯಕ್ಷರು ಅಧಿಕಾರವಧಿಯಲ್ಲಿ ನಿಧನ ಹೊಂದಿದಲ್ಲಿ ಆ ಘಟಕದ ಕಾರ್ಯಚಟುವಟಿಕೆಗಳು ಕುಂಠಿತಗೊಳ್ಳದಂತೆ ಕೇಂದ್ರ ಘಟಕದ ಅಧ್ಯಕ್ಷರು ನಿರ್ಣಯ ಕೈಗೊಳ್ಳಬಹುದಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.