ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಜಗತ್ತಿನ ಪ್ರಧಾನ ಭಾಷೆಗಳಿಗೆ ವಚನಗಳು ಅನುವಾದವಾಗಲಿ‘

Last Updated 26 ಮೇ 2021, 22:19 IST
ಅಕ್ಷರ ಗಾತ್ರ

ಬೆಂಗಳೂರು: ’ವಚನ ಸಾಹಿತ್ಯ ಅಥವಾ ಶರಣ ಸಾಹಿತ್ಯವು ಚಲನಶೀಲವಾದ, ಸಂವಾದನಾ ಪ್ರಧಾನವಾದ ಚಿಂತನಧಾರೆಗಳು. ಇವುಗಳನ್ನು ಇಂಗ್ಲಿಷ್‌ ಮಾತ್ರವಲ್ಲದೆ ಜಗತ್ತಿನ ಪ್ರಧಾನ ಭಾಷೆಗಳಿಗೆ ಅನುವಾದ ಮಾಡಬೇಕಾದ ಅಗತ್ಯವಿದೆ‘ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ಶಿವಪ್ರಕಾಶ್‌ ಹೇಳಿದರು.

ಕನ್ನಡ ಚಿ‌ಂತನಮಾಲೆ ಶೀರ್ಷಿಕೆಯಡಿ ’ಶರಣ ಸಾಹಿತ್ಯ ಮರು ಚಿಂತನೆ‘ ಕುರಿತು ಆನ್‌ಲೈನ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ’ಬಹಳಷ್ಟು ಜನ ಶರಣ ಸಾಹಿತ್ಯವನ್ನು ಧಾರ್ಮಿಕ ಸಾಹಿತ್ಯವಾಗಿ ನೋಡುತ್ತಾರೆ. ಆದರೆ, ಅದರಲ್ಲಿ ಅನುಭಾವದ ಅಭಿವ್ಯಕ್ತಿ ಕಾಣುತ್ತದೆ‘ ಎಂದು ಅಭಿಪ್ರಾಯಪಟ್ಟರು.

’ಉಪನಿಷತ್ತುಕಾರರು ವಾನಪ್ರಸ್ಥಾಶ್ರಮದಲ್ಲಿದ್ದಾಗ ಉಪನಿಷತ್ತುಗಳನ್ನು ರಚಿಸಿದರು. ಅಂದರೆ, ಅವರು ಅರಣ್ಯದಲ್ಲಿ ಜನರಿಂದ ದೂರ ಇದ್ದು ಈ ಗ್ರಂಥಗಳನ್ನು ರಚಿಸಿದರು. ಆದರೆ, ವಚನಕಾರರು ನಾಡಿನ ಮಧ್ಯೆ ಇದ್ದು, ದೈನಂದಿನ ಜೀವನದ ಎಲ್ಲ ಒತ್ತಡಗಳ ಮಧ್ಯೆಯೇ ತಮ್ಮ ಚಿಂತನೆ ರೂಪಿಸಿಕೊಂಡರು. ಹೀಗಾಗಿ, ವಚನಗಳು ಜನರ ತತ್‌ಕ್ಷಣದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ‘ ಎಂದರು.

’ಪೂರ್ವಗ್ರಹಗಳನ್ನು ಬಿಟ್ಟು ವಚನ ಸಾಹಿತ್ಯವನ್ನು ನೋಡಬೇಕಾಗಿದೆ. ವಚನಗಳಲ್ಲಿ ಸಮಾಜವಾದ, ಸ್ತ್ರೀವಾದ ಮತ್ತು ಪ್ರಜಾಸತ್ತಾತ್ಮಕ ಅಂಶಗಳು ಇವೆ. ಕಾಯಕವನ್ನೂ ಕೂಡ ಆಧ್ಮಾತ್ಮಿಕ ಸಾಧನೆಯನ್ನಾಗಿ ಮಾಡಿಕೊಂಡಿರುವ ವೈಶಿಷ್ಟ್ಯ ವಚನಗಳದ್ದು‘ ಎಂದು ಅಭಿಪ್ರಾಯಪಟ್ಟರು.

ಅಮೆರಿಕದಲ್ಲಿರುವ ಡಾ. ಸಜ್ಜನ ಶಿವ, ’ವಚನಗಳನ್ನು ರಚಿಸಿದ 300ರಿಂದ 350 ಶರಣಗರು ಬೇರೆ ಬೇರೆ ವರ್ಗ, ಬೇರೆ ಬೇರೆ ವಿಧದವರಾಗಿದ್ದರು. ಆದರೆ, ಇವರೆಲ್ಲರೂ ಓದು–ಬರಹ ಬಲ್ಲವರಾಗಿದ್ದರೇ ಎಂಬ ಬಗ್ಗೆ ನನಗೆ ಕುತೂಹಲವಿದೆ. ಬಸವಣ್ಣನವರು ಸಂಸ್ಕೃತದ ಬದಲು ಕನ್ನಡದಲ್ಲಿ ಸಾಹಿತ್ಯ ರಚಿಸುವುದಂತೆ ಪ್ರೇರೇಪಿಸಿದ್ದರು ಎನ್ನುವುದೇನೋ ಸರಿ. ಆದರೆ, ಎಲ್ಲರೂ ಕನ್ನಡ ಓದು–ಬರಹ ಕಲಿತಿದ್ದರೆ ಎಂಬ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸುವ ಅವಶ್ಯಕತೆ ಇದೆ‘ ಎಂದರು.

ಶೇಷಾದ್ರಿಪುರದ ಸಂಜೆ ಪದವಿ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಯು ಸಂಸ್ಕೃತಿ-ಸಂಗಮ ಸಾಹಿತ್ಯ ಸೇವಾ ಪ್ರತಿಷ್ಠಾನ, ಬೆಂಗಳೂರು ಹಾಗೂ ಅಮೆರಿಕದ ಸಿದ್ಧಗಂಗಾ ಹ್ಯುಮಾನಿಟೇರಿಯನ್ ಮಿಷನ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಪ್ರಾಚಾರ್ಯ ಪ್ರೊ. ಎನ್.ಎಸ್. ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT