ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ವ ಬ್ಯಾಂಕ್: ₹255 ಕೋಟಿ ಆಸ್ತಿ ಮುಟ್ಟುಗೋಲು

Last Updated 25 ಸೆಪ್ಟೆಂಬರ್ 2020, 23:13 IST
ಅಕ್ಷರ ಗಾತ್ರ

ಬೆಂಗಳೂರು:ಕಣ್ವ ಸೌಹಾರ್ದ ಕೋ–ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ ವಂಚನೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಎನ್‌.ನಂಜುಂಡಯ್ಯ ಮತ್ತವರ ಕುಟುಂಬ ಸದಸ್ಯರ ಹೆಸರಿನಲ್ಲಿದ್ದ ₹255.17 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಸಾರ್ವಜನಿಕರಿಗೆಹೆಚ್ಚಿನ ಬಡ್ಡಿದರದ ಆಮಿಷ ಒಡ್ಡಿ ಏಜೆಂಟ್‌ಗಳ ಮೂಲಕ ₹650 ಕೋಟಿ ಸಂಗ್ರಹಿಸಿ ಮೋಸ ಮಾಡಿದ್ದ ಆರೋಪದಲ್ಲಿ ಬಸವೇಶ್ವರನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ಆರೋಪಿ ನಂಜುಂಡಯ್ಯ ಅವರನ್ನು ಬಂಧಿಸಿತ್ತು. ಏಳು ದಿನಗಳ ಕಾಲ ವಿಚಾರಣೆ ನಡೆಸಿದ ಇ.ಡಿ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

‘ಅಕ್ರಮವಾಗಿ ಹಣ ಸಂಗ್ರಹ ಮಾಡಿರುವುದಲ್ಲದೇ ಅದೇ ಹಣದಲ್ಲಿ ಹೂಡಿಕೆದಾರಲ್ಲದವರಿಗೂ ಭದ್ರತೆ ರಹಿತ ಸಾಲ ನೀಡಿದ್ದರು. ನಂಜುಂಡಯ್ಯ ಮತ್ತು ಬ್ಯಾಂಕಿನ ಇತರ ನಿರ್ದೇಶಕರ ಮನೆಗಳ ಮೇಲೆ ದಾಳಿ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಎಲ್ಲಾ ಕಾರಣಗಳಿಂದ ಬ್ಯಾಂಕ್ ನಷ್ಟದಲ್ಲಿದ್ದರೂ, ಲಾಭದಲ್ಲಿದೆ ಎಂಬಂತೆ ಬಿಂಬಿಸಲಾಗಿದೆ. ಸಂಗ್ರಹವಾದ ಮೊತ್ತದಲ್ಲಿ ಸುಮಾರು ₹400 ಕೋಟಿಯಷ್ಟನ್ನು ವಂಚಿಸಲಾಗಿದೆ. ಈ ಹಣವನ್ನು ಬ್ಯಾಂಕಿಗೆ ಸಂಬಂಧಪಡದ ವಿವಿಧ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದ್ದಾರೆ.

‘160 ಸ್ಥಿರಾಸ್ತಿಯಲ್ಲದೇ ಹಲವರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಿದ್ದು, ಅದರಲ್ಲಿ ಕೆಲ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಸದ್ಯ ಇರುವ ₹255.17 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT