ಭಾನುವಾರ, ಏಪ್ರಿಲ್ 5, 2020
19 °C
ಯೆರಮರಸ್‌ ಯೋಜನೆ ಜಾರಿ ವಿಳಂಬ

ವಿದ್ಯುತ್‌ ಖರೀದಿ: ₹2,517 ಕೋಟಿ ಹೆಚ್ಚುವರಿ ವೆಚ್ಚ, ಸಿಎಜಿ ವರದಿಯಲ್ಲಿ ಲೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಯಚೂರಿನ ಯೆರಮರಸ್‌ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಸ್ಥಾವರದ ಕಾರ್ಯಾರಂಭ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ ಹೆಚ್ಚುವರಿ ವಿದ್ಯುತ್‌ ಖರೀದಿಗೆ ₹2,517 ಕೋಟಿ ವೆಚ್ಚ ಮಾಡಿದೆ.

ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಸಾರ್ವಜನಿಕ ಉದ್ಯಮಗಳ ಮೇಲಿನ ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಯೋಜನೆಯ ವಿಳಂಬದ ಲೋಪಗಳ ಬಗ್ಗೆ ಬೊಟ್ಟು ಮಾಡಿ ತೋರಿಸಲಾಗಿದೆ.

ಸ್ಥಾವರ ಆರಂಭ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮವು 2008ರ ಜೂನ್‌ನಲ್ಲಿ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ ಜತೆಗೆ ಒಪ್ಪಂದ ಮಾಡಿಕೊಂಡಿತು. ಈ ಯೋಜನೆಯನ್ನು 2014ರ ಅಕ್ಟೋಬರ್‌ ತಿಂಗಳೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, 2017ರ ಏಪ್ರಿಲ್‌ನಲ್ಲಿ ವಾರ್ಷಿಕ ಕಾರ್ಯಾಚರಣೆಗೆ ಯೋಜನೆ ಸಿದ್ಧ ಎಂದು ಪ್ರಕಟಿಸಲಾಯಿತು. ಇದರಿಂದಾಗಿ, ಯೋಜನಾ ವೆಚ್ಚ ಹಿಗ್ಗಿತು. ಈ ವೇಳೆ, ವಿದ್ಯುತ್‌ ಉತ್ಪಾದನಾ ಶುಲ್ಕ ಸಹ ಯುನಿಟ್‌ ಒಂದಕ್ಕೆ ₹3.24ರಿಂದ ತಾತ್ಕಾಲಿಕವಾಗಿ ₹5.36ಕ್ಕೆ ಹೆಚ್ಚಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆಯೂ ಕರ್ನಾಟಕ ವಿದ್ಯುತ್‌ ನಿಗಮವು ಹಲವು ಯೋಜನೆಗಳನ್ನು ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ಗೆ ವಹಿಸಿತ್ತು. ಆದರೆ, ಸಂಸ್ಥೆಯು ಯೋಜನೆಗಳ ಅನುಷ್ಠಾನದ ವೇಳೆಗೆ ಹಲವು ತೊಂದರೆಗಳನ್ನು ಎದುರಿಸಿತ್ತು. ಈ ಅಂಶಗಳನ್ನು ಗಮನಿಸಿದೆಯೇ ನಿಗಮವು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಬದಲು ಖಾಸಗಿ ಸಹಭಾಗಿತ್ವದ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು ಎಂದು ಸಲಹೆ ನೀಡಲಾಗಿದೆ.  

ಯೋಜನೆ ಹಾದಿ ತಪ್ಪಿದ್ದು ಎಲ್ಲಿ?

* ಯೋಜನೆಯ ವಿನ್ಯಾಸ ರಚನೆಯಲ್ಲಿ ಪದೇ ಪದೇ ಬದಲಾವಣೆ ಮಾಡಿದ್ದು ಹಾಗೂ ಕಂಪನಿಯು ಮಣ್ಣನ್ನು ‍ಪುನರ್‌ ಪರೀಕ್ಷೆ
ಮಾಡಿದ್ದರಿಂದ ಯೋಜನೆ 17 ತಿಂಗಳು ತಡವಾಗಿ ಆರಂಭವಾಯಿತು.

* ಮೆಗಾ ವಿದ್ಯುತ್‌ ಯೋಜನೆಯ ಅಡಿಯ ಅಬಕಾರಿ/ಮಾರಾಟತೆರಿಗೆಯ ವಿನಾಯಿತಿ ಪಡೆಯುವ ಪ್ರಯತ್ನವನ್ನೂ ನಡೆಸಿಲ್ಲ. ಒಂದು ವೇಳೆ ಈ ಪ್ರಯತ್ನ ಮಾಡಿದ್ದರೆ ₹335.01 ಕೋಟಿಯಷ್ಟು ವಿನಾಯಿತಿ ದೊರಕುತ್ತಿತ್ತು.

* ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ಗುರುತಿಸದಿದ್ದುದು ಹಾಗೂ ಸ್ಥಳವನ್ನು ಪದೇ ಪದೇ ಬದಲಾವಣೆ ಮಾಡಿದ್ದು ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಲು ಕಾರಣ. ಇದರಿಂದಾಗಿ, ಕಲ್ಲಿದ್ದಲು ಸಾಗಣೆಗೆ ರೈಲ್ವೆ ಉಪ ಮಾರ್ಗ ಹಾಗೂ ವ್ಯಾಗನ್ನುಗಳ ನಿಲುಗಡೆ ವ್ಯವಸ್ಥೆ ಪ್ರಾಂಗಣ ಕಾಮಗಾರಿ ತಡವಾಯಿತು.

* ಶೀತಲ ಗೋಪುರದ ಮಾದರಿಯನ್ನು ಅಂತಿಮ ರೂಪಕ್ಕೆ ತರುವಲ್ಲಿ ವಿಫಲವಾಗಿದ್ದರಿಂದ ಹಾಗೂ ವಿನ್ಯಾಸಗಳಿಗೆ ಅನುಮೋದನೆ ನೀಡುವ ವೇಳೆ ವಿಳಂಬ ಮಾಡಿದ್ದರಿಂದ ಕೊಳವೆ ಮಾರ್ಗದ ಕಾಮಗಾರಿಗೆ ₹29.75 ಕೋಟಿ ಹೆಚ್ಚುವರಿ ಪಾವತಿ ಮಾಡಲಾಯಿತು.

ಸಾರ್ವಜನಿಕ ಉದ್ಯಮಗಳಿಂದ ₹1,470 ಕೋಟಿ ನಷ್ಟ
ರಾಜ್ಯದ 25 ಸಾರ್ವಜನಿಕ ಉದ್ದಿಮೆಗಳು 2018ರ ಮಾರ್ಚ್‌ ಅಂತ್ಯದ ವೇಳೆಗೆ 1,470 ಕೋಟಿ ನಷ್ಟ ಅನುಭವಿಸಿದ್ದವು. ಅದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ₹261 ಕೋಟಿಯಷ್ಟು ಇದೆ.

ಕರ್ನಾಟಕ ರಾಜ್ಯ ಖನಿಜ ನಿಗಮ ₹316 ಕೋಟಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ₹124 ಕೋಟಿ ಹಾಗೂ ಕರ್ನಾಟಕ ನೀರಾವರಿ ನಿಗಮ ₹576 ಕೋಟಿ ಲಾಭ ಗಳಿಸಿದ್ದವು ಎಂದು ವರದಿಯಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು