ಭಾನುವಾರ, ಡಿಸೆಂಬರ್ 8, 2019
21 °C

ಯಶವಂತಪುರ ಕ್ಷೇತ್ರ ಅನುದಾನ ಅನುರಣನ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಯಶವಂತಪುರವೂ ಒಂದು. ಹೊಸ ಮನ್ವಂತರದ ಹಾದಿಯಲ್ಲಿರುವ ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಎರಡು ಬಾರಿ ಪರಾಭವಗೊಂಡಿರುವ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎರಡು ಅವಧಿಯಿಂದ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನು ಈ ಬಾರಿಯೂ ಬಿಟ್ಟುಕೊಡಬಾರದು ಎಂಬ ಉತ್ಸಾಹದಲ್ಲಿದ್ದಾರೆ ಕಾಂಗ್ರೆಸ್‌ ಅಭ್ಯರ್ಥಿ ಪಿ. ನಾಗರಾಜ್. ಕಟ್ಟಾಳುಗಳ ಮನದ ಮಾತು ಅರಿಯುವ ಯತ್ನ ಮಾಡಿದ್ದಾರೆ ಗುರು ಪಿ.ಎಸ್.

ಯಾರಿಗೂ ದ್ರೋಹ ಮಾಡಿಲ್ಲ-  ಎಸ್.ಟಿ. ಸೋಮಶೇಖರ್

* ಜನ ಮತ್ತೆ ನಿಮಗೇ ಏಕೆ ಮತ ಹಾಕಬೇಕು ? 

ಯಾವುದೇ ಸರ್ಕಾರವಿರಲಿ, ಕ್ಷೇತ್ರಕ್ಕೆ ಅನುದಾನ ತರುತ್ತೇನೆ. ಐದು ವರ್ಷ ನಮ್ಮದೇ ಸರ್ಕಾರ
ವಿದ್ದಾಗ ₹3,000 ಕೋಟಿ ಅನುದಾನ ತಂದು, ಕ್ಷೇತ್ರದ ಇಡೀ 17 ಪಂಚಾಯಿತಿಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮಾಗಡಿ ರಸ್ತೆಯನ್ನು ನಾಲ್ಕು ಪಥವಾಗಿಸಿದ್ದೇನೆ. 2 ಹಳ್ಳಿಗಳಿಗೆ ಮಂಚನಬೆಲೆ ಯೋಜನೆಯಿಂದ
ನೀರು ತರುವ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ಈಗಾಗಲೇ ₹761 ಕೋಟಿ ಅನುದಾನ ಕೊಟ್ಟಿದ್ದಾರೆ. ಈ ಸರ್ಕಾರದ ಅವಧಿ ಇನ್ನೂ ಮೂರೂವರೆ ವರ್ಷವಿದೆ. ಪ್ರತಿವರ್ಷವೂ ಅನುದಾನ ಕೊಡುವಂತೆ ಮನವಿ ಮಾಡಿದ್ದೇನೆ. ಇದರ ಆಧಾರದ ಮೇಲೆಯೇ ಮತ ಕೇಳುತ್ತೇನೆ. 

* 20 ವರ್ಷದಿಂದ ಇದ್ದ ಪಕ್ಷಕ್ಕೆ ದ್ರೋಹ ಮಾಡಿದಿರಿ ಎಂಬ ಆರೋಪವಿದೆ 

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು, ಪಕ್ಷ ಬಿಟ್ಟಿರಲಿಲ್ಲ. ಆದರೆ, ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ನಂತರವೇ, ಕ್ಷೇತ್ರದ ಅಭಿವೃದ್ಧಿಗೆ ಯಾರು ಅನುದಾನ ಕೊಡುತ್ತಾರೋ ಆ ಪಕ್ಷಕ್ಕೆ ಹೋಗಿದ್ದೇನೆ. ನಾವು 77 ಶಾಸಕರಿದ್ದರೂ, 37 ಸದಸ್ಯರಿದ್ದವರ ಮುಂದೆ ಕೈಕಟ್ಟಿ ನಿಂತು
ಕೊಳ್ಳಬೇಕಾಗಿತ್ತು. ಕಾಂಗ್ರೆಸ್‌ ನಾಯಕರಿಗೆ ಅಲ್ಲಿ ಬೆಲೆಯೇ ಇರಲಿಲ್ಲ. ಎಲ್ಲರಿಗೂ ಈ ಅನುಭವವಾಗಿದೆ. ಆದರೆ, ಅವರು ಬಹಿರಂಗವಾಗಿ ಹೇಳುತ್ತಿಲ್ಲವಷ್ಟೇ.  

* ನೀವು ಸ್ಥಳೀಯರಲ್ಲ ಎಂದು ವಿರೋಧಿಗಳು ಹೇಳುತ್ತಿದ್ದಾರೆ 

ನಾನು ಹೊರಗಿನವನಾಗಿದ್ದರೆ ಜನರು ಏಕೆ ಎರಡು ಬಾರಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡುತ್ತಿದ್ದರು. ಹೊರಗಿನವರು–ಒಳಗಿನವರು ಎನ್ನುವುದ
ಕ್ಕಿಂತಲೂ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಾರೋ, ಅಭಿವೃದ್ಧಿ ಮಾಡುತ್ತಾರೋ ಅವರನ್ನು ಜನ ಆಶೀರ್ವದಿಸುತ್ತಾರೆ.

*ಬಿಜೆಪಿಯನ್ನೂ ತೊರೆಯುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ ಎಂದೂ ಜನ ಕೇಳುತ್ತಿದ್ದಾರೆ

ನಾನು ಯಾವುದೇ ಪಕ್ಷದಲ್ಲಿದ್ದರೂ ನೂರಕ್ಕೆ ನೂರರಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಮುಖ್ಯ. ಹಾಗೆಯೇ,  ಕ್ಷೇತ್ರಕ್ಕೆ ಅನುದಾನ ತರುವುದು ಸುಲಭದ ಮಾತಲ್ಲ.

 

ಕಸಮುಕ್ತ ಕ್ಷೇತ್ರವೇ ನನ್ನ ಗುರಿ  -ಟಿ.ಎನ್. ಜವರಾಯಿಗೌಡ

* ನಿಮಗೆ ಏಕೆ ಮತ ಹಾಕಬೇಕು ? 

ಸಮ್ಮಿಶ್ರ ಸರ್ಕಾರ ಪತನವಾಗಲು ಯಾರು ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಮತ್ತೆ ಅವರಿಗೇ ಏಕೆ ಮತ ಹಾಕಬೇಕು? ಐದು ವರ್ಷ ಕಾಲ ಅವಧಿ ಇದ್ದರೂ, ಮತದಾರರ ತೀರ್ಪು ಧಿಕ್ಕರಿಸಿ ಹೋಗಿದ್ದಾರೆ. ಈ ಬಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ, ಪಕ್ಷಕ್ಕೆ ನಿಷ್ಠರಾಗಿರುವವರನ್ನು ಜನ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.

* ಕ್ಷೇತ್ರದಲ್ಲಿ ನಿಮ್ಮ ಆದ್ಯತೆ ಏನು ?  

ಕ್ಷೇತ್ರದಲ್ಲಿ ಐದು ಘನತ್ಯಾಜ್ಯ ಸಂಸ್ಕರಣ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಕ್ಷೇತ್ರ ಪೂರ್ತಿ ಕಸದ ಕೊಂಪೆಯಂತಾಗಿದೆ. ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಘಟಕಗಳ ಸ್ಥಳಾಂತರಕ್ಕೆ ಆದ್ಯತೆ ನೀಡುತ್ತೇನೆ. ನಮ್ಮ ಕ್ಷೇತ್ರದ ಕಸ ವಿಲೇವಾರಿಗೆ ಸೂಕ್ತ ಜಾಗ ಹುಡುಕಿ ವ್ಯವಸ್ಥೆ ಮಾಡುತ್ತೇನೆ. ಆದರೆ, ಬೆಂಗಳೂರಿನ ಎಲ್ಲ ಕಸವನ್ನು ತಂದು ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಸುರಿಯಲು ಅವಕಾಶ ಕೊಡುವುದಿಲ್ಲ.

* ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶಾಸಕರು ಪ್ರತಿವರ್ಷ ನೂರಾರು ಕೋಟಿ ಅನುದಾನ ತಂದಿದ್ದಾರೆ. ನಿಮ್ಮಿಂದಲೂ ಜನ ಇದನ್ನು ನಿರೀಕ್ಷಿಸಬಹುದೇ ? 

ರಸ್ತೆ ಮಾಡಿ, ಕಾಂಕ್ರೀಟ್‌ ಹಾಕುವುದೇ ಅಭಿವೃದ್ಧಿ ಅಲ್ಲ. ಕಾಮಗಾರಿ ಹೆಸರಿನಲ್ಲಿ ಹಣ ಮಾಡುವುದೂ ಅಭಿವೃದ್ಧಿ ಅಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದಕ್ಕೆ ಶಾಶ್ವತ  ವ್ಯವಸ್ಥೆ ಮಾಡಬೇಕು. ಕರ್ನಾಟಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ (ಕೆಆರ್‌ಐಡಿಎಲ್‌)  ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದರಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ. ಆ ಕೆಲಸವನ್ನು ನಾನು ಮಾಡುತ್ತೇನೆ.

* ಅನುಕಂಪವಿದೆ ಎನ್ನುತ್ತೀರಿ. ಅದೊಂದರಿಂದಲೇ ಗೆಲುವು ಸಾಧ್ಯವೆ?

ಅನುಕಂಪ ಮಾತ್ರವಲ್ಲ. ಎಲ್ಲ ಸಮುದಾಯದವರ ಬೆಂಬಲವೂ ಸಿಗುತ್ತಿದೆ. ಈಗ ಬಿಜೆಪಿ ಅಭ್ಯರ್ಥಿ ಆಗಿರುವವರು ಹಿಂದೆ ಎರಡು ಬಾರಿ ಗೆದ್ದಿದ್ದು ಅದೃಷ್ಟದಿಂದ. ಈ ಬಾರಿ ಅವರಿಗೆ ಅದೃಷ್ಟ ಕೈಕೊಡಲಿದೆ. ಅನರ್ಹರಿಗೆ ಜನರೂ ಅನರ್ಹತೆ ಉಡುಗೊರೆಯನ್ನೇ ನೀಡಲಿದ್ದಾರೆ ಎಂಬ ವಿಶ್ವಾಸವಿದೆ.

ಮತವಿರುವುದು ಮನೆಗಳಲ್ಲಿ -ಪಿ. ನಾಗರಾಜ್

* ನಿಮ್ಮ ಪಕ್ಷದ ಸ್ಥಳೀಯ ನಾಯಕರು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಇದು ನಿಮಗೆ ಹಿನ್ನಡೆಯಲ್ಲವೇ? 

ಯಾವುದೇ ನಾಯಕನಾದರೂ ಅವರಿಗೆ ಇರುವುದು ಒಂದೇ ಮತ. ಜನ ಮತ ಹಾಕಿದರೆ ಮಾತ್ರ ‘ಲೀಡರ್‌’ ಆಗುತ್ತಾರೆ. ಸ್ಥಳೀಯ ನಾಯಕರಿಗಿಂತ ಜನರನ್ನು ನಾನು ನಂಬುತ್ತೇನೆ. ಬೇರೆ ಪಕ್ಷಗಳ ಅಭ್ಯರ್ಥಿಗಳಂತೆ ಅಬ್ಬರದ ಪ್ರಚಾರ ಮಾಡುವುದಕ್ಕಿಂತ ಮನೆ ಮನೆಗೆ ತೆರಳಿ ಮತ
ಯಾಚಿಸುತ್ತಿದ್ದೇನೆ. ಯಾವುದೇ ನಾಯಕರು ಪಕ್ಷದಿಂದ ಹೋದರೂ ನನಗೆ ಚಿಂತೆ ಇಲ್ಲ. 

* ಜನ ನಿಮಗೇ ಏಕೆ ಮತ ಹಾಕಬೇಕು?  

ಬೇರೆ ಪಕ್ಷಗಳ ಅಭ್ಯರ್ಥಿಗಳ ಅಭ್ಯರ್ಥಿಗಳು ಹೊರಗಿನವರು. ನಾನು ಕೆಂಗೇರಿ ಉಪನಗರ ನಿವಾಸಿ. ಬಿಜೆಪಿ–ಜೆಡಿಎಸ್‌ ಅಭ್ಯರ್ಥಿಗಳಿಗಿಂತ ಕ್ಷೇತ್ರದ ಬಗ್ಗೆ ನನಗೆ ಹೆಚ್ಚು ಗೊತ್ತು. ಮತ ಮಾರಿಕೊಂಡ
ವರನ್ನು ಜನ ಬೈದು ಕಳುಹಿಸುತ್ತಿದ್ದಾರೆ. ಆರೂವರೆ ವರ್ಷ ಶಾಸಕರಾಗಿ, ಬಿಡಿಎ ಅಧ್ಯಕ್ಷರಾಗಿದ್ದರೂ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಸಾವಿರಾರು ಕೋಟಿ ಅನುದಾನ ನೀಡಿದರೂ, ಅನುದಾನ ಸಿಗಲಿಲ್ಲ ಎಂದು ಹೇಳಿ ಪಕ್ಷಕ್ಕೆ ದ್ರೋಹ ಮಾಡಿದರು. ಅವರನ್ನು ಪುನರಾಯ್ಕೆ ಮಾಡಿದರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು? ಕ್ಷೇತ್ರದ ಅಭಿವೃದ್ಧಿಗಾಗಿ ಜನರು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ.

* ನಿಮ್ಮ ಆದ್ಯತೆ ಏನು ? 

ಕ್ಷೇತ್ರದಲ್ಲಿ ಐದು ತ್ಯಾಜ್ಯ ಸಂಸ್ಕರಣ ಘಟಕಗಳಿದ್ದು, ದುರ್ವಾಸನೆ ತಡೆಯಲು ಆಗುತ್ತಿಲ್ಲ. ಜನ ನೆಮ್ಮದಿಯಾಗಿ ಊಟ, ತಿಂಡಿ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಘಟಕಗಳನ್ನು ಸ್ಥಳಾಂತರ ಮಾಡಬೇಕು. ಅಲ್ಲದೆ, ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ನಿಟ್ಟಿನಲ್ಲಿ ಶಾಶ್ವತ ಯೋಜನೆ ರೂಪಿಸಲು ಶ್ರಮಿಸುತ್ತೇನೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು