ಭಾನುವಾರ, ನವೆಂಬರ್ 29, 2020
22 °C
ಸೋಲುವ ಭಯದಿಂದ ಚುನಾವಣಾ ಅಕ್ರಮ; ಹಲವೆಡೆ ಮತದಾರರಿಗೆ ಹಣ ಹಂಚಿಕೆ, ಕೆಲವೆಡೆ ತಡೆ–ಕಾಂಗ್ರೆಸ್‌ ಆರೋಪ

ಆರ್‌.ಆರ್‌.ನಗರ ಕ್ಷೇತ್ರ: 5 ಗಂಟೆವರೆಗೆ ಶೇ 39.15ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌.ಆರ್‌,ನಗರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳು

ಬೆಂಗಳೂರು: ‘ಆರ್‌.ಆರ್‌. ನಗರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಸೋಲುವ ಭಯದಿಂದ ಬಿಜೆಪಿಯವರು ಗಲಾಟೆ, ದೊಂಬಿ ಮಾಡಿಸುತ್ತಿದ್ದಾರೆ. ಮಧ್ಯಾಹ್ನದವರೆಗೆ ಶಾಂತಿಯುತವಾಗಿ ಮತದಾನ ನಡೆದಿದೆ. ಆದರೆ, ನಂತರ ಮತದಾರರು ಮತದಾನಕ್ಕೆ ಬರದಂತೆ ತಡೆಯೊಡ್ಡುತ್ತಿದ್ದಾರೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ. ಹೆಚ್ಚಿನ ಪೊಲೀಸರ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ವಿಧಾನಪರಿಷತ್‌ ಸದಸ್ಯ ಕಾಂಗ್ರೆಸ್ ನಾರಾಯಣಸ್ವಾಮಿ ಹೇಳಿದರು.

‘ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಧೈರ್ಯವಾಗಿ ಬಂದು ಮತದಾನ ಮಾಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಸಂಜೆ 5 ಗಂಟೆವರೆಗೆ ಕೇವಲ ಶೇ 39.15ರಷ್ಟು ಮತದಾನ ನಡೆದಿದೆ.

ಬಿಜೆಪಿಯಿಂದ ಹಣ ಹಂಚಿಕೆ–ಆರೋಪ: ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ, ‘ಕೊಟ್ಟಿಗೆಪಾಳ್ಯ ವಾರ್ಡ್‌ನ ಮಾಲಗಾಳದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಜಿ. ಮೋಹನ್ ಕುಮಾರ್ ಬಾಮೈದ ಮತ್ತು ಅವರ ಸೋದರ ಮುಕ್ತವಾಗಿ ಹಣ ಹಂಚುತ್ತಿದ್ದಾರೆ. ಒಂದು ಮತಕ್ಕೆ ₹2 ಸಾವಿರ  ಹಂಚುತ್ತಿದ್ದಾರೆ’ ಎಂದಿದ್ದಾರೆ.

‘ಈಗಾಗಲೇ ನಾನು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇನೆ. ಇಂತಹ ಅಕ್ರಮಗಳನ್ನು ಮಾಡಿ ಚುನಾವಣೆ ಗೆಲ್ಲಬಹುದು ಅಂದುಕೊಂಡಿದ್ದಾರೆ. ಮತದಾರರು ಈಗಾಗಲೇ ಅವರನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎನ್ನುವುದು ದಾಷ್ಟ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಅಭ್ಯರ್ಥಿ ಇವತ್ತು ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ. ನಿಜವಾಗಿಯೂ ಅದು ನೆರವೇರುವುದಿಲ್ಲ. ಬೆಳಿಗ್ಗೆಯಿಂದ ಸುಮಾರು ಶೇ 80ರಷ್ಟು ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದೇನೆ. ಮತದಾರರು ಸಂತೋಷದಿಂದ ಮತದಾನ ಮಾಡಲು ಬರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ತನ್ನ ಸೋಲಿನ ಭಯದಿಂದ ಹಲವು ಕಡೆ ಅಕ್ರಮಗಳಲ್ಲಿ ತೊಡಗಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಕರೆ ಮಾಡಿ ನನಗೆ ಮಾಹಿತಿ ನೀಡಿದ್ದಾರೆ’ ಎಂದರು.

ಮತಗಟ್ಟೆಗಳಿಗೆ ಭೇಟಿ: ಯಶವಂತಪುರ, ಜಾಲಹಳ್ಳಿಯ ವಿವಿಧ ಮತಗಟ್ಟೆಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಭೇಟಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು