ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ಅಭಿವೃದ್ಧಿಗೆ ‘ವಿಷನ್‌ ಡಾಕ್ಯುಮೆಂಟ್‌’: ಬಸವರಾಜ ಬೊಮ್ಮಾಯಿ

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ l ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 12 ಜೂನ್ 2022, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ರಾಜಧಾನಿಯಲ್ಲಿ ಮತ್ತಷ್ಟು ವ್ಯವಸ್ಥಿತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಪೂರಕವಾಗಿ ‘ವಿಷನ್‌ ಡಾಕ್ಯುಮೆಂಟ್‌’ ಸಿದ್ಧಪಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಪ್ರಕಟಿಸಿದರು.

ನಾಗರಬಾವಿ ಬಿಡಿಎ ಸಂಕೀರ್ಣದ ಬಳಿ ನಡೆದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಉಲ್ಲಾಳ ಮತ್ತು ಅನ್ನಪೂರ್ಣೇಶ್ವರಿನಗರ ಮುಖ್ಯರಸ್ತೆಗೆ ಅಡ್ಡಲಾಗಿ ‘ಗ್ರೇಡ್‌ ಸೆಪರೇಟರ್‌’ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ– ತುಮಕೂರು ರಸ್ತೆ ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗೆ ಹಾಗೂಸುಮನಹಳ್ಳಿ ಜಂಕ್ಷನ್‌ನಿಂದ ಅಂಬೇಡ್ಕರ್‌ ಕಾಲೇಜಿನವರೆಗೆ ಕಾಂಕ್ರೀಟ್‌ತಡೆಗೋಡೆಗಳ ನಿರ್ಮಾಣ ಕಾಮಗಾರಿ ಗಳಿಗೆ ಚಾಲನೆ ನೀಡಲಾಯಿತು.

ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಈಗ ಬೃಹತ್ತಾಗಿ ಬೆಳೆಯುತ್ತಿದೆ. ಈಗ ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವ ಹೊಣೆ ಸರ್ಕಾರದ ಮೇಲಿದೆ. ಅದಕ್ಕೆ ಪೂರಕವಾಗಿ ‘ವಿಷನ್‌ ಡಾಕ್ಯುಮೆಂಟ್‌’ ಸಿದ್ಧಪಡಿಲಾಗುವುದು ಎಂದು ವಿವರಿಸಿದರು.

₹3,000 ಕೋಟಿ ವೆಚ್ಚದಲ್ಲಿ ರಾಜಕಾಲುವೆಗಳ ದುರಸ್ತಿ, ಪುನ ರುಜ್ಜೀವನ ಕಾಮಗಾರಿ ನಡೆಯುತ್ತಿದೆ. ಸಂಚಾರ ದಟ್ಟಣೆ ತಗ್ಗಿಸಲು ‘ಸಿಗ್ನಲ್‌ ರಹಿತ ಕಾರಿಡಾರ್‌‘ಗಳ ನಿರ್ಮಾಣ ಪ್ರಗತಿಯಲ್ಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲು ಬಯಸುವುದಿಲ್ಲ ಎಂದು ಹೇಳಿದರು.

‘ನಮ್ಮ ಮೆಟ್ರೊ’ ಎರಡನೇ ಹಂತದ ಕಾಮಗಾರಿಗಳನ್ನು 2024ರ ಅಂತ್ಯದೊಳಗೆ ಮುಗಿಸಲು ಗಡುವು ನೀಡಲಾಗಿದೆ. ₹ 15,000 ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ಇದೇ 21ರಂದು ಪ್ರಧಾನಿ ಚಾಲನೆ ನೀಡುವರು’ ಎಂದರು.

₹250 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ: ಲಗ್ಗೆರೆ, ಅನ್ನಪೂರ್ಣೇಶ್ವರಿನಗರ, ಉಲ್ಲಾಳ, ಹೊಸಕೆರೆಹಳ್ಳಿ, ಕೆಂಚೇನಹಳ್ಳಿ ವ್ಯಾಪ್ತಿಯಲ್ಲಿ ಒಟ್ಟು ₹ 250 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ, ಸಚಿವರಾದ ಮುನಿರತ್ನ, ಆರ್‌.ಅಶೋಕ, ವಿ.ಸೋಮಣ್ಣ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಂಸದ ಡಿ.ಕೆ.ಸುರೇಶ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಉಪಸ್ಥಿತರಿದ್ದರು.

‘ಬಡವರ ವಸತಿಗೆ 5,000 ಎಕರೆ’

ಬೆಂಗಳೂರು: ನಗರದಲ್ಲಿ ಬಡ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ಬೆಂಗಳೂರು ನಗರ ಹೊರವಲಯದಲ್ಲಿ 5,000 ಎಕರೆ ಜಮೀನು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯ ಕೊಳೆಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1,588 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾ‍ಪನೆ ನೆರವೇರಿಸಿ ಅವರು, ‘ಐದು ವರ್ಷಗಳಲ್ಲಿ ಎಲ್ಲರಿಗೂ ಸೂರು ಒದಗಿಸುವ ಗುರಿ ಸರ್ಕಾರದ್ದಾಗಿದೆ. ಇದಕ್ಕಾಗಿ ಸರ್ಕಾರಿ ಜಮೀನು ಗುರುತಿಸಿ, ಮೀಸಲಿಡಲಾಗುವುದು. ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣ ಗುರಿ ಇದೆ. ಇದಕ್ಕಾಗಿ ಫಲಾನುಭವಿಗಳ ಪಾಲಿನ ವಂತಿಕೆ ಭರಿಸಲು ಸರ್ಕಾರದ ಖಾತರಿಯಲ್ಲಿ ₹ 500 ಕೋಟಿ ಸಾಲ ಪಡೆಯಲಾಗುವುದು’ ಎಂದು ಹೇಳಿದರು.

ಸಂಸದರು – ಸಚಿವರ ವಾಕ್ಸಮರ

ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಸದ ಡಿ.ಕೆ.ಸುರೇಶ್‌ ಹಾಗೂ ಸಚಿವ ಮುನಿರತ್ನ ನಡುವೆ ವೇದಿಕೆಯಲ್ಲೇ ವಾಕ್ಸಮರ ನಡೆಯಿತು.

‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳೇ ನಡೆಯುವುದಿಲ್ಲ. ಕ್ಷೇತ್ರದ ಹೊರಗಿನವರಿಗೆ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಸುರೇಶ್‌ ಆರೋಪಿಸಿದರು.

‘ಇಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಯಾರೇ ಹೊರಗಿನವರು ಮನೆ ಪಡೆದಿರುವುದನ್ನು ತೋರಿಸಿದರೆ ಅವರನ್ನು ಹೊರಗಟ್ಟುತ್ತೇನೆ’ ಎಂದು ಮುನಿರತ್ನ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT