ಗುರುವಾರ , ಅಕ್ಟೋಬರ್ 24, 2019
21 °C
ನಾಳೆಯಿಂದ ವಿಧಾನಮಂಡಲ ಅಧಿವೇಶನ, ಕೇಂದ್ರ ಪರಿಹಾರ ವಿಳಂಬ ಚರ್ಚೆ

ನೆರೆ ಸಂಕಷ್ಟ: ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು

Published:
Updated:

ಬೆಂಗಳೂರು: ಇದೇ 10ರಿಂದ ವಿಧಾನಮಂಡಲದ ಮೂರು ದಿನಗಳ ಅಧಿವೇಶನ ಆರಂಭವಾಗಲಿದ್ದು, ನೆರೆ ಸಂತ್ರಸ್ತರ ಸಂಕಷ್ಟ, ಕೇಂದ್ರದಿಂದ ಅನುದಾನ ಬಿಡುಗಡೆ ವಿಳಂಬದ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿ ಸಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ.

ಮೂರು ದಿನಗಳಿಗೆ ಸೀಮಿತವಾ ಗಿರುವ ಅಧಿವೇಶನವನ್ನು ಇನ್ನೂ ಕೆಲವು ದಿನಗಳವರೆಗೆ ವಿಸ್ತರಿಸಬೇಕು ಎಂದು ಪಟ್ಟು ಹಿಡಿಯಲು ವಿರೋಧ ಪಕ್ಷಗಳು ಚಿಂತನೆ ನಡೆಸಿವೆ. ಈ ಸಂಬಂಧ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ನೆರೆ ಸಂತ್ರಸ್ತರ ಸಂಕಷ್ಟ, ಬರಿದಾದ ಬೊಕ್ಕಸ ಮತ್ತು ಇತರ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆಗೆ ಪಟ್ಟು ಹಿಡಿದು ವಿರೋಧ ಪಕ್ಷಗಳು ಗದ್ದಲ ಎಬ್ಬಿಸುವು ದರಿಂದ, ಕಲಾಪವು ಸುಗಮವಾಗಿ ನಡೆಯುವ ಸಾಧ್ಯತೆ ಇಲ್ಲ. ಇದೇ ಅವಕಾಶ ಬಳಸಿಕೊಂಡು, ಪೂರಕ ಅಂದಾಜಿಗೆ ಒಪ್ಪಿಗೆ ಪಡೆದು, ಕಲಾಪ ಮುಂದೂಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರವಾಹ ಬಂದು 60 ದಿನಗಳು ಕಳೆದರೂ ಪರಿಹಾರಕ್ಕಾಗಿ  ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈ ಕುರಿತು ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟುತ್ತಿದ್ದಂತೆ ಕೇಂದ್ರ ಸರ್ಕಾರ ₹1,200 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿತು. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಇದಕ್ಕೆ ಮುನ್ನ ರಾಜ್ಯ ಸರ್ಕಾರ ₹400 ಕೋಟಿ ಮತ್ತು ₹ 500 ಕೋಟಿಯಂತೆ ಎರಡು ಕಂತುಗಳಲ್ಲಿ ಪರಿಹಾರ ಕಾರ್ಯಕ್ಕೆ ಒಟ್ಟು ₹900 ಕೋಟಿ ಹಣ ಬಿಡುಗಡೆ ಮಾಡಿದ್ದನ್ನು, ಸರ್ಕಾರ ಸಮರ್ಥನೆಗೆ ಬಳಸಿಕೊಳ್ಳಲಿದೆ.

ಬಾರಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲಿ ನಡೆಸುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಳಗಾವಿಯಲ್ಲಿ ನೆರೆ ಸಂತ್ರಸ್ತರ ಪ್ರತಿಭಟನೆಯ ಬಿಸಿ ಎದುರಿಸಲು ಸಾಧ್ಯ ವಾಗದೇ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ದೂರಿದ್ದು, ಇದು ಕೂಡ ಬಿಸಿ ಬಿಸಿ ಚರ್ಚೆಗೆ ಕಾರಣವಾಗಲಿದೆ.

ಶಾಸಕಾಂಗ ಪಕ್ಷದ ಸಭೆ: ಈ ಅಧಿ ವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಬುಧವಾರವೇ ಶಾಸಕಾಂಗ ಪಕ್ಷದ ಸಭೆಗಳನ್ನು ಕರೆದಿವೆ.

ನೆರೆ ವಿಚಾರದಲ್ಲಿ ಸರ್ಕಾರ ವಿವಿಧ ಜಿಲ್ಲೆಗಳಲ್ಲಿ ನಡೆಸಿರುವ ಪರಿಹಾರ ಕಾರ್ಯಗಳು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿರುವ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿರೋಧ ಪಕ್ಷಗಳನ್ನು ಎದುರಿಸಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಲೂ ಬರದ ಸ್ಥಿತಿ ಇದೆ.  ಸರ್ಕಾರ ಅಲ್ಲಿನ ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ವಿಚಾರವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಸ್ತಾಪಿಸಲಿವೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸದಸ್ಯರು ದೂರವಾಣಿ ಕದ್ದಾಲಿಕೆ, ಐಎಂಎ ವಂಚನೆ ಪ್ರಕರಣವನ್ನು ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.

ಮೂರು ಪಕ್ಷಗಳಲ್ಲೂ ಭಿನ್ನಮತ
ರಾಜ್ಯದ ಮೂರು ಪ್ರಮುಖ ಪಕ್ಷಗಳೂ ಈಗ ಒಡೆದ ಮನೆಯಾಗಿವೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಮಧ್ಯೆ ಸಮನ್ವಯವಿಲ್ಲ. ಪಕ್ಷ ಮತ್ತು ಸರ್ಕಾರದ ಮಧ್ಯೆ ತಾಳಮೇಳ ಇಲ್ಲವಾಗಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಎಚ್‌.ಕೆ.ಪಾಟೀಲ ಮತ್ತು ಜಿ.ಪರಮೇಶ್ವರ ಮಧ್ಯೆ ಪೈಪೋಟಿ ನಡೆದಿದ್ದು, ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಬಾರದು ಮತ್ತು ದಿನೇಶ್‌ ಗುಂಡೂರಾವ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ಮೂಲ ಕಾಂಗ್ರೆಸ್ಸಿಗರು ಒತ್ತಡ ಹೇರಿದ್ದಾರೆ.

ಮೈತ್ರಿ ಸರ್ಕಾರ ಪತನವಾದ ಬಳಿಕ ಜೆಡಿಎಸ್‌ನ ಕೆಲವು ಶಾಸಕರು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವು ಶಾಸಕರು ಬಿಜೆಪಿಯತ್ತಲೂ, ಇನ್ನು ಕೆಲವರು ಕಾಂಗ್ರೆಸ್‌ನತ್ತ ಒಲವು ತೋರಿಸಲಾರಂಭಿಸಿದ್ದಾರೆ. ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ಕೆಲ ಶಾಸಕರು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)