ಭಾನುವಾರ, ಸೆಪ್ಟೆಂಬರ್ 15, 2019
30 °C

ನೆರೆ ಸಂತ್ರಸ್ತ ವಕೀಲರ ನೆರವಿಗೆ ₹ 20 ಲಕ್ಷ ಸಂಗ್ರಹ

Published:
Updated:
Prajavani

ಬೆಂಗಳೂರು: ‘ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ₹20 ಲಕ್ಷಕ್ಕೂ ಹೆಚ್ಚು ಹಣ ಮತ್ತು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ’ ಎಂದು ಬೆಂಗಳೂರು ವಕೀಲರ ಸಂಘ ತಿಳಿಸಿದೆ.

ಬೆಳಗಾವಿ ಜಿಲ್ಲೆಯ ನೆರೆಪೀಡಿತ ವಕೀಲರಿಗೆ ಇದೇ 23ರಂದು (ಶುಕ್ರವಾರ) ಅಗತ್ಯ ಸಾಮಗ್ರಿ ವಿತರಿಸಲಾಗುತ್ತಿದ್ದು, ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿರುವ ವಾಹನಕ್ಕೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಗುರುವಾರ ಹೈಕೋರ್ಟ್ ಆವರಣದಲ್ಲಿ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ‘ಸಂತ್ರಸ್ತರಿಗಾಗಿ 250 ಅಕ್ಕಿಮೂಟೆ, ಬಟ್ಟೆ, ದವಸ ಧಾನ್ಯ, ವಿವಿಧ ಔಷಧಿಗಳು, ಬ್ಲಾಂಕೆಟ್‌ಗಳು ಮತ್ತು ಬಟ್ಟೆ ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ’ ಎಂದು ತಿಳಿಸಿದರು.

ಇದೇ 23ರಂದು ಮಧ್ಯಾಹ್ನ ಬೆಳಗಾವಿ ವಕೀಲರ ಸಂಘದ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತೊಂದರೆಗೀಡಾಗಿರುವ 164 ವಕೀಲರಿಗೆ ಪರಿಹಾರ ಹಣ ಮತ್ತು ಅಗತ್ಯ ವಸ್ತುಗಳನ್ನು ವಿಸ್ತರಿಸಲಾಗುವುದು’ ಎಂದರು.

‘ಪ್ರತಿಯೊಬ್ಬ ವಕೀಲರ ಕುಟುಂಬಕ್ಕೆ ₹10 ರಿಂದ ₹15 ಸಾವಿರ ಸಹಾಯ ಒದಗಿಸಲಾಗುವುದು. ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿನ ವಕೀಲರಿಗೆ ಮಾತ್ರ ಪರಿಹಾರ ಸಾಮಗ್ರಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ನೆರೆ ಪೀಡಿತ ಪ್ರದೇಶಗಳಿಗೂ ತೆರಳಿ ಸಂತ್ರಸ್ತ ವಕೀಲರಿಗೆ ನೆರವು ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್‌.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಕೆ.ಎನ್‌.ಪುಟ್ಟೇಗೌಡ, ಎನ್‌.ಪಿ. ಅಮೃತೇಶ್‌ ಮತ್ತು ವಕೀಲರು ಇದ್ದರು.

Post Comments (+)