ಭಾನುವಾರ, ಸೆಪ್ಟೆಂಬರ್ 26, 2021
23 °C
4 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ವಿಧಾನಸಭಾ ಕ್ಷೇತ್ರಕ್ಕೊಂದು ದ್ವಿತೀಯ ಹಂತದ ಆಸ್ಪತ್ರೆ, ವಾರ್ಡ್‌ಗೊಂದು ಯುಪಿಎಚ್‌ಸಿ– ಬಿಬಿಎಂಪಿ ಬೇಡಿಕೆ

ಆರೋಗ್ಯ ಮೂಲಸೌಕರ್ಯ: ಭಾರ ಹೊರುವುದೇ ಸರ್ಕಾರ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಆರೋಗ್ಯ ಸೌಕರ್ಯದಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಆದರೆ, ಈ ನಗರದ ಆರೋಗ್ಯ ಸೌಕರ್ಯದಲ್ಲಿ ಸರ್ಕಾರಿ ವ್ಯವಸ್ಥೆಯ ಪಾಲೆಷ್ಟು ಎಂದು ನೋಡಿದರೆ ನಿರಾಶಾದಾಯಕ ಸ್ಥಿತಿ ಇದೆ. ಅದರಲ್ಲೂ ಸರ್ಕಾರದ ನೆರವಿನ ಅಗತ್ಯ ಹೆಚ್ಚು ಇರುವ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಸೌಕರ್ಯಗಳಲ್ಲಂತೂ ಮಹಾನಗರ ತೀರಾ ಹಿಂದುಳಿದಿದೆ.

ಕೋವಿಡ್‌ ಮೊದಲ ಅಲೆ ಕಾಣಿಸಿಕೊಂಡ ಬಳಿಕ ಪ್ರಾಥಮಿಕ ಹಂತದ ಆರೋಗ್ಯ ಸೌಕರ್ಯಗಳ ಬಲವರ್ಧನೆಗೆ ಬಿಬಿಎಂಪಿ ಪ್ರಸ್ತಾವ ಸಿದ್ಧಪಡಿಸಿತ್ತು. 57 ವಾರ್ಡ್‌ಗಳಿಗೆ ಪಿಎಚ್‌ಸಿಗಳನ್ನು ಮಂಜೂರು ಮಾಡುವಂತೆ ಕೋರಿ 2020ರ ಜು.29ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕಾಗಿ ₹ 22.94 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಮೂಲಕ 57 ಕಡೆ ಜನಾರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು 2021–22ನೇ ಸಾಲಿನ ಬಜೆಟ್‌ನಲ್ಲಿ ಕೇವಲ ₹ 10 ಕೋಟಿ ಅನುದಾನ ಒದಗಿಸಿತ್ತು. 

ಕೋವಿಡ್‌ ಎರಡನೇ ಅಲೆಯ ವೇಳೆ ಉಂಟಾದ ಭಾರಿ ಸಾವು ನೋವುಗಳನ್ನು ಕಂಡ ಬಳಿಕ ಆರೋಗ್ಯ ಮೂಲ ಸೌಕರ್ಯದ ವಿಚಾರದಲ್ಲಿ ಬಿಬಿಎಂಪಿ ಆತ್ಮಾವಲೋಕನ ಮಾಡಿಕೊಂಡಿದೆ. ನಗರದಲ್ಲಿ ಮೂರೂ ಹಂತಗಳ ಆರೋಗ್ಯ ಸೇವೆ ಬಲವರ್ಧನೆಗೆ ಹೊಸ ಪ್ರಸ್ತಾವ ಸಿದ್ಧಪಡಿಸಿದೆ. ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಇತ್ತೀಚೆಗೆ  ಕೋರಿಕೆ ಸಲ್ಲಿಸಿದೆ. 

ಆರೋಗ್ಯ ಸೌಕರ್ಯವರ್ಧನೆ–ಪ್ರಸ್ತಾವಗಳೇನು?

ನಗರದಲ್ಲಿ ತೃತೀಯ ಹಂತದ ಆರೈಕೆ ವ್ಯವಸ್ಥೆಯ ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವುದು, ಪ್ರತಿ ಕ್ಷೇತ್ರದಲ್ಲೂ (ಒಟ್ಟು 27) ತಲಾ 50ರಿಂದ 100 ಹಾಸಿಗೆಗಳ ಸಾಮರ್ಥ್ಯದ ದ್ವಿತೀಯ ಹಂತದ ಆಸ್ಪತ್ರೆಗಳನ್ನು ಸ್ಥಾಪಿಸುವುದು ಹಾಗೂ 57 ಯುಪಿಎಚ್‌ಸಿಗಳನ್ನು ಸ್ಥಾಪಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಪಾಲಿಕೆ ಸಲ್ಲಿಸಿದೆ. ಜೊತೆಗೆ ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳ ಸೌಕರ್ಯ ಕಲ್ಪಿಸುವುದು ಹಾಗೂ 31 ಕಡೆ ಕೋವಿಡ್‌ ಚಿಕಿತ್ಸೆ ನಿರ್ಧಾರ ಕೇಂದ್ರ (ಟ್ರಯಾಜ್‌ ಸೆಂಟರ್‌) ಸ್ಥಾಪನೆ ಹಾಗೂ ಯುಪಿಎಚ್‌ಸಿಗಳಲ್ಲಿ ಮಾನವ ಸಂಪನ್ಮೂಲ ಹೆಚ್ಚಳ ಮಾಡುವ ಅಂಶಗಳೂ ಇದರಲ್ಲಿವೆ.

ರಾಜರಾಜೇಶ್ವರಿನಗರ ವಲಯದ ಯಶವಂತಪುರದಲ್ಲಿ ಆರಂಭಿಸಿರುವ ಕೋವಿಡ್‌ ಆಸ್ಪತ್ರೆಯನ್ನೇ ತೃತೀಯ ಹಂತದ ಆಸ್ಪತ್ರೆಯನ್ನಾಗಿ ಪರಿವರ್ತಿಸಬಹುದು. ಇಲ್ಲಿ 300 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಬಹುದು. ಇದಕ್ಕೆ ಹೆಚ್ಚುವರಿ ಅನುದಾನದ ಅಗತ್ಯವಿಲ್ಲ. ಪೂರ್ವ ವಲಯದಲ್ಲಿ ಶಾಂತಿನಗರ ಹೆರಿಗೆ ಮನೆಯ(ಮ್ಯಾಟರ್ನಿಟಿ ಹೋಮ್‌) ಪ್ರಾಂಗಣದಲ್ಲಿ ₹ 66 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಿಸಬಹುದು. ಪಶ್ಚಿಮ ವಲಯದ ಎಂ.ಸಿ ಬಡಾವಣೆಯಲ್ಲಿ ₹ 55 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ, ಬೊಮ್ಮನಹಳ್ಳಿ ವಲಯದಲ್ಲಿ ಪುಟ್ಟೇನಹಳ್ಳಿಯಲ್ಲಿ ಬನ್ನೇರುಘಟ್ಟ ರಸ್ತೆ ಬಳಿ ₹ 65 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ ಯೋಜನೆಗಳು ಬಿಬಿಎಂಪಿ ಮುಂದಿವೆ. 

ತೃತೀಯ ಹಂತದ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯಕೀಯ ವಿಭಾಗದ ಜೊತೆಗೆ ಮಕ್ಕಳ ಚಿಕಿತ್ಸೆ, ಸ್ತ್ರೀರೋಗ, ಪ್ರಸೂತಿ, ಮನೋರೋಗ, ನರರೋಗ, ಕ್ಯಾನ್ಸರ್‌ ಚಿಕಿತ್ಸೆ ಮುಂತಾದ ವಿಶೇಷ ಚಿಕಿತ್ಸಾ ಸೌಕರ್ಯಗಳಿರಬೇಕು. ಶಸ್ತ್ರಚಿಕಿತ್ಸೆ ಹಾಗೂ ಸೂಪರ್‌ಸ್ಪೆಷಾಲಿಟಿ ಸೇವೆಗಳು ಲಭ್ಯವಿರಬೇಕು. ಇವುಗಳ ಮೂಲಸೌಕರ್ಯಕ್ಕಾಗಿ ₹ 185 ಕೋಟಿ ಅನುದಾನ ಬೇಕು ಎಂಬುದು ಬಿಬಿಎಂಪಿಯ ಬೇಡಿಕೆ.

ತಳ ಹಂತಕ್ಕೆ ಹೆಚ್ಚುವರಿ ಸಿಬ್ಬಂದಿ: ತಳ ಹಂತದ ಆರೋಗ್ಯ ಸೇವೆಯ ಕೊರತೆ ನೀಗಿಸಲು 871 ಕಿರಿಯ ಆರೋಗ್ಯ ಸಹಾಯಕಿಯರು (ಎಎನ್‌ಎಂ), 330 ಕಿರಿಯ ಆರೋಗ್ಯ ಪರಿವೀಕ್ಷಕರು (ಜೆಎಚ್‌ಐ) ಹಾಗೂ 1622 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 2,823 ಆರೋಗ್ಯ ಕಾರ್ಯಕರ್ತರ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವವನ್ನು ಪಾಲಿಕೆಯು ಸರ್ಕಾರದ ಮುಂದಿಟ್ಟಿದೆ.

ಆರೋಗ್ಯ ಮೂಲಸೌಕರ್ಯ ವರ್ಧನೆ ಕುರಿತು ಬಿಬಿಎಂಪಿಯು ಸಲ್ಲಿಸಿರುವ ಪ್ರಸ್ತಾವನೆ ಹಣಕಾಸು ಇಲಾಖೆ ಮುಂದಿದೆ. ಶೀಘ್ರವೇ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಗ್ಯ ಸೌಕರ್ಯದ ವೃದ್ಧಿಸಿದರೆ ಕೋವಿಡ್‌ನಂತ ಸಾಂಕ್ರಾಮಿಕ ರೋಗಗಳನ್ನು ಮಣಿಸುವುದು ಸುಲಭ ಎಂಬುದು ಬಿಬಿಎಂಪಿಯ ನಿರೀಕ್ಷೆ. ಆದರೆ, ಈ ಎಲ್ಲ ಸೌಕರ್ಯಗಳಿಗೆ ₹ 714.94 ಕೋಟಿ ಅನುದಾನದ ಅಗತ್ಯವಿದೆ. ಜೊತೆಗೆ ವೈದ್ಯರು, ಶುಶ್ರೂಷಕರು, ಇತರ ಅರೆ ವೈದ್ಯಕೀಯ ಸಿಬ್ಬಂದಿ, ಕಚೇರಿ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಬೇಕಾಗುತ್ತದೆ. ಸಿಬ್ಬಂದಿ ನೇಮಕ ಮತ್ತು ಆಸ್ಪತ್ರೆಗಳ ನಿರ್ವಹಣೆಗೆ, ಔಷಧ ಖರೀದಿಗೆ ₹ 527.33 ಕೋಟಿ ಹೆಚ್ಚುವರಿ ವೆಚ್ಚ ತಗಲುತ್ತದೆ. ಒಟ್ಟು ₹ 1242. 27 ಕೋಟಿ ಅನುದಾನವನ್ನು ಬಿಬಿಎಂಪಿ ನಿರೀಕ್ಷೆ ಮಾಡುತ್ತಿದೆ. ಇಷ್ಟೆಲ್ಲ ನಿರೀಕ್ಷೆಗಳ ಭಾರವನ್ನು ಈಡೇರಿಸುವಷ್ಟು ಅನುದಾನವನ್ನು ಸರ್ಕಾರ ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಒದಗಿಸುತ್ತದೆಯೇ ಎಂಬುದು ಯಕ್ಷ ಪ್ರಶ್ನೆ.

ಆರೋಗ್ಯ ಸೌಕರ್ಯ: ಕೊರತೆಗಳೇನು?

ಆರೋಗ್ಯ ಸೇವಾ ಕ್ಷೇತ್ರದ ಬೇಡಿಕೆಗಳು ಹಾಗೂ ಸೌಕರ್ಯಗಳ ನಡುವಿನ ಕೊರತೆಗಳನ್ನು ಕೋವಿಡ್‌ ಎರಡನೇ ಅಲೆ ಜಗಜ್ಜಾಹೀರು ಮಾಡಿತು. ನಗರದಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಯ ಬಲವರ್ಧನೆಯ ಅಗತ್ಯವಿದೆ ಎಂದು ಬಿಬಿಎಂಪಿ ಪ್ರತಿಪಾದಿಸಿದೆ.

ಪ್ರಾಥಮಿಕ ಆರೋಗ್ಯ ಸೇವೆ: ಭಾರತದ ಮಾನದಂಡಗಳ ಪ್ರಕಾರ ಪ್ರತಿ 50 ಸಾವಿರ ಜನರಿಗೆ ತಲಾ ಒಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಯುಪಿಎಚ್‌ಸಿ) ಇರಬೇಕು. ಆದರೆ,  1.30 ಕೋಟಿ ಜನಸಂಖ್ಯೆಗೆ ಇರುವುದು 140 ಯುಪಿಎಚ್‌ಸಿಗಳು ಮಾತ್ರ. ಅಂದರೆ, 92 ಸಾವಿರ ಜನರಿಗೆ ತಲಾ ಒಂದು ಯುಪಿಎಚ್‌ಸಿ ನಗರದಲ್ಲಿದೆ. 57 ವಾರ್ಡ್‌ಗಳಲ್ಲಿ ಯುಪಿಎಚ್‌ಸಿಯೇ ಇಲ್ಲ. ಈ ಕೊರತೆಯಿಂದಾಗಿ ಸಾಂಕ್ರಾಮಿಕ ರೋಗ ತಡೆಗಟ್ಟುವ, ನಿಯಂತ್ರಿಸುವ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. 

ದ್ವಿತೀಯ ಹಂತ ಆಸ್ಪತ್ರೆಗಳು: ಯುಪಿಎಚ್‌ಸಿಗಳಿಂದ ಹೆಚ್ಚಿನ ಚಿಕಿತ್ಸೆಗೆ ಶಿಫಾರಸುಗೊಳ್ಳುವವರ ಚಿಕಿತ್ಸೆಗೆ ಸರ್ಕಾರಿ ವ್ಯವಸ್ಥೆಯ ದ್ವಿತೀಯ ಹಂತದ ಆಸ್ಪತ್ರೆಗಳ ಸಂಖ್ಯೆಯೂ ತೀರಾ ಕಡಿಮೆ ಇದೆ. ಸರ್ಕಾರದ ಮಾನದಂಡಗಳ ಪ್ರಕಾರ 1.2 ಲಕ್ಷ ಜನಸಂಖ್ಯೆಗೆ ತಲಾ ಒಂದು ದ್ವಿತೀಯ ಹಂತದ ಆಸ್ಪತ್ರೆ ಇರಬೇಕು.  ನಗರದ ಜನಸಂಖ್ಯೆಗೆ 108 ದ್ವಿತೀಯ ಹಂತದ ಆಸ್ಪತ್ರೆಗಳ ಅಗತ್ಯವಿದೆ. ಆದರೆ, ಬಿಬಿಎಂಪಿ ಅಧೀನದಲ್ಲಿ  ಕೇವಲ 7 ರೆಫರಲ್‌  ಆಸ್ಪತ್ರೆಗಳಿವೆ. ಈ ಕೊರತೆಯಿಂದಾಗಿ ನಗರದ ದೊಡ್ಡ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ತೃತೀಯ ಹಂತದ ಆಸ್ಪತ್ರೆಗಳು: ರೋಗಿಗಳ ಚಿಕಿತ್ಸೆ ಸಕಲ ಸೌಕರ್ಯ ಹೊಂದಿರಬೇಕಾದ ಇಂತಹ ಯಾವುದೇ ಆಸ್ಪತ್ರೆಗಳನ್ನೂ ಬಿಬಿಎಂಪಿ ನಡೆಸುತ್ತಿಲ್ಲ. ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಖಾಸಗಿ ವಲಯದಲ್ಲಿ ಇಂತಹ ಆಸ್ಪತ್ರೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಸರ್ಕಾರಿ ವಲಯದ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ.

ದ್ವಿತೀಯ ಹಂತದ ಆಸ್ಪತ್ರೆ–ಯೋಜನೆಗಳೇನು?

ದ್ವಿತೀಯ ಹಂತದ ಆಸ್ಪತ್ರೆಗಳು ಯುಪಿಎಚ್‌ಸಿಗಳಿಂದ ಶಿಫಾರಸುಗೊಂಡು ಬರುವ ರೋಗಿಗಳಿಗೆ ವಿಶೇಷ ತಜ್ಞರ ಸೇವೆ ಹಾಗೂ ಪ್ರಸೂತಿ ಸೇವೆಗಳನ್ನು ಒದಗಿಸಬೇಕು. ಇಲ್ಲಿ ಸಾಮಾನ್ಯ ವೈದ್ಯರು, ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳ ಚಿಕಿತ್ಸಾ ತಜ್ಞರ ಸೇವೆ ಲಭ್ಯ ಇರಬೇಕು. ಒಳ ರೋಗಿ ವಿಭಾಗದಲ್ಲಿ 30 ಹಾಸಿಗೆಗಳಿರಬೇಕು. ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ ಹಾಗೂ ರೋಗ ಪತ್ತೆ ಸೌಕರ್ಯಗಳನ್ನು ಹೊಂದಿರಬೇಕು. ಪ್ರತಿ ವಿಭಾಗಕ್ಕೊಂದು ಇಂತಹ ಆಸ್ಪತ್ರೆ ಹೊಂದಬೇಕು ಎಂಬುದು ಬಿಬಿಎಂಪಿ ಆಶಯ.

ಬಿಬಿಎಂಪಿ ಅಧೀನದಲ್ಲಿ ಈಗಾಗಲೇ ತಲಾ 150 ಹಾಸಿಗೆಗಳ ವ್ಯವಸ್ಥೆಯ ಆರು ಹಾಗೂ 300 ಹಾಸಿಗೆ ವ್ಯವಸ್ಥೆಯ ಒಂದು ಆಸ್ಪತ್ರೆ ಸೇರಿ ಒಟ್ಟು ಏಳು ರೆಫರಲ್‌ ಆಸ್ಪತ್ರೆಗಳಿವೆ. ಗೋವಿಂದರಾಜನಗರದಲ್ಲಿ ಸಂಗೊಳ್ಳಿರಾಯಣ್ಣ ಡಯಾಲಿಸಿಸ್‌ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 100 ಹಾಸಿಗೆ ಸೌಕರ್ಯಗಳಿರುವ ಇದನ್ನೇ ಆಸ್ಪತ್ರೆಯನ್ನಾಗಿ ಬಳಸಬಹುದು. ಪುಲಿಕೇಶಿನಗರ ಕ್ಷೇತ್ರದಲ್ಲಿ ಬಿಲಾಲ್‌ನಗರ, ಸರ್ವಜ್ಞನಗರ ಕ್ಷೇತ್ರದ ಎಚ್‌ಬಿಆರ್‌ ಬಡಾವಣೆ, ಆರ್‌.ಆರ್‌.ನಗರದ ಯಶವಂತಪುರ ಜನರಲ್‌ ಆಸ್ಪತ್ರೆ, ಮಹಾಲಕ್ಷ್ಮಿ ಬಡಾವಣೆಯ ನಂದಿನಿ ಬಡಾವಣೆಗಳಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳು, ಬ್ಯಾಟರಾಯನಪುರ ಕ್ಷೇತ್ರದ ಸಿಂಗಪುರದಲ್ಲಿ 70 ಹಾಸಿಗೆ ಸಾಮರ್ಥ್ಯದ  ಆಸ್ಪತ್ರೆ , ಚಿಕ್ಕಪೇಟೆಯ ಸಿದ್ದಯ ಆಸ್ಪತ್ರೆ ಪ್ರಾಂಗಣದಲ್ಲಿ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹಾಗೂ ಪದ್ಮನಾಭನಗರದ ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಚಾಮರಾಜಪೇಟೆ ಕ್ಷೇತ್ರದ ಬಾಬು ಜಗಜೀವನರಾಮ್‌ ನಗರದ ಆಸ್ಪತ್ರೆಯಲ್ಲಿ ₹ 13. 2 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಮಹಡಿ ನಿರ್ಮಿಸಿ 60 ಹಾಸಿಗೆ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ.

ಏಳು ಕಡೆ ಈಗಿರುವ ಆರೋಗ್ಯ ಕೇಂದ್ರಗಳ ಬಳಿಯೇ ಹೊಸ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ. ಐದು ಕಡೆ ಹೊಸತಾಗಿ ಆಸ್ಪತ್ರೆಗಳ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಜಾಗ ಹುಡುಕಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಿಂಗಸಂದ್ರ, ದಾಸರಹಳ್ಳಿ ಕ್ಷೇತ್ರದಲ್ಲಿ ಅಬ್ಬಿಗೆರೆ, ಬಸವನಗುಡಿ ಕ್ಷೇತ್ರದ ವಿದ್ಯಾಪೀಠ ಯುಪಿಎಚ್‌ಸಿಗಳನ್ನು ಹಾಗೂ ಹೆಬ್ಬಾಳದ ಕ್ಷೇತ್ರದಲ್ಲಿ ಮುನಿರೆಡ್ಡಿಪಾಳ್ಯ ಹೆರಿಗೆ ಕೇಂದ್ರ ಮತ್ತು ವಿಜಯನಗರ ಕ್ಷೇತ್ರದ ಆಜಾದ್‌ನಗರ ಹೆರಿಗೆ ಕೇಂದ್ರಗಳನ್ನು ತಲಾ 100 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಇದೆ. ಪ್ರತಿ ಆಸ್ಪತ್ರೆಗೆ ತಲಾ ₹ 22 ಕೋಟಿಯಂತೆ ಒಟ್ಟು ₹ 110 ಕೋಟಿ ಅನುದಾನದ ಅಗತ್ಯವಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಕೋಣನಕುಂಟೆ ಯುಪಿಎಚ್‌ಸಿ ಪ್ರಾಂಗಣದಲ್ಲಿ, ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ಗೇಟ್‌, ಯಶವಂತಪುರ ಕ್ಷೇತ್ರದ ಉಳ್ಳಾಲು, ಬಿಟಿಎಂ ಬಡಾವಣೆ ಕ್ಷೇತ್ರದ ಹಳೆ ಪಾಸ್‌ಪೋರ್ಟ್‌ ಕಚೇರಿ ಬಳಿ ಹಾಗೂ ಮಲ್ಲೇಶ್ವರ ಕ್ಷೇತ್ರದ ಸ್ಯಾಂಕಿ ಕೆರೆ ಬಳಿ ತಲಾ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲು ಒಟ್ಟು ₹ 110 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. 

‘ಸಾಂಕ್ರಾಮಿಕ ನಿರ್ವಹಣೆಗೆ ಸೌಕರ್ಯ ಹೆಚ್ಚಳ ಅನಿವಾರ್ಯ’

ಗುಣಮಟ್ಟದ ಹಾಗೂ ಸುಲಭವಾಗಿ ಕೈಗೆಟಕುವಂತಹ ಆರೋಗ್ಯ ಸೇವೆಯನ್ನು ಬೆಂಗಳೂರಿನ ಎಲ್ಲ ನಾಗರಿಕರಿಗೂ ಒದಗಿಸುವುದು ನಮ್ಮ ಉದ್ದೇಶ. ಏನೆಲ್ಲ ಆರೋಗ್ಯ ಸೌಕರ್ಯಗಳನ್ನು ಹೊಸದಾಗಿ ನಿರ್ಮಿಸಬೇಕು, ಇವುಗಳ ಸಿದ್ಧತೆ ಯಾವ ಹಂತದಲ್ಲಿದೆ, ಇದಕ್ಕೆ ಎಷ್ಟು ಅನುದಾನ ಅಗತ್ಯ ಎಂಬ ವಿವರವಾದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ಎದುರಿಸಲು ಆರೋಗ್ಯ ಸೌಕರ್ಯವನ್ನು ಬಲಪಡಿಸಲೇಬೇಕಾದ ಅನಿವಾರ್ಯ ಇದೆ.

-ಗೌರವ್ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂಪಿ

ಯಾವುದಕ್ಕೆ– ಎಷ್ಟು ವೆಚ್ಚ?

ಸೌಕರ್ಯ; ಸಂಖ್ಯೆ; ವೆಚ್ಚ (₹ ಕೋಟಿಗಳಲ್ಲಿ)

ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ; 57;  115.50

ದ್ವಿತೀಯ ಹಂತದ ಆಸ್ಪತ್ರೆ ನಿರ್ಮಾಣ; 12; 349.00

ತೃತೀಯ ಹಂತದ ಆಸ್ಪತ್ರೆ ನಿರ್ಮಾಣ; 4; 238.20

ಮಕ್ಕಳ ಚಿಕಿತ್ಸಾ ಕೇಂದ್ರಗಳ ಅಭಿವೃದ್ಧಿ; 7;  10.61

ಭೌತಿಕ ಚಿಕಿತ್ಸಾ ನಿರ್ಧಾರ ಕೇಂದ್ರಗಳ ಅಭಿವೃದ್ಧಿ; 31; 1.63

ಹೊಸ ಆರೋಗ್ಯ ಸೌಕರ್ಯ; ವಾರ್ಷಿಕ ನಿರ್ವಹಣೆ ವೆಚ್ಚ

ಸೌಕರ್ಯ; ವೆಚ್ಚ (₹ ಕೋಟಿ)

57 ಯುಪಿಎಚ್‌ಸಿ; 11.80

ದ್ವಿತೀಯ ಹಂತದ 20 ಆಸ್ಪತ್ರೆ; 97.80

ತೃತೀಯ ಹಂತದ 4 ಹೊಸ ಆಸ್ಪತ್ರೆ; 400.00

ಮಕ್ಕಳ ಚಿಕಿತ್ಸೆಯ 7 ಆಸ್ಪತ್ರೆ; 15.30

ಕ್ಷೇತ್ರ ಸಿಬ್ಬಂದಿ ವೇತನ; 2.37

ಆರೋಗ್ಯ ಸೇವೆ– ವಲಯವಾರು ಸೌಕರ್ಯಗಳ ವಿವರ

ಬೊಮ್ಮನಹಳ್ಳಿ

ತೃತೀಯ ಹಂತ; 1; ಒಂದು ಆಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿಲ್ಲ, ಒಂದು ಕಡೆ ಜಾಗ ಗುರುತಿಸಲಾಗಿದೆ

ದ್ವಿತೀಯ ಹಂತ; 2; ಒಂದೂ ಕಾರ್ಯನಿರ್ವಹಿಸುತ್ತಿಲ್ಲ; ಒಂದು ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ, ಇನ್ನೊಂದಕ್ಕೆ ಜಾಗ ಗುರುತಿಸಲಾಗಿದೆ

ಪ್ರಾಥಮಿಕ ಹಂತ; 43; 26 ಯುಪಿಎಚ್‌ಸಿಗಳಿವೆ; 17 ಯುಪಿಎಚ್‌ಸಿ ನಿರ್ಮಾಣಕ್ಕೆ ಪ್ರಸ್ತಾವ ಸಿದ್ಧ

ದಾಸರಹಳ್ಳಿ

ತೃತೀಯ ಹಂತ; 0; ಒಂದು ಆಸ್ಪತ್ರೆಯೂ ಇಲ್ಲ

ದ್ವಿತೀಯ ಹಂತ; 1; ಒಂದು ಯುಪಿಎಚ್‌ಸಿಯನ್ನು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ

ಪ್ರಾಥಮಿಕ ಹಂತ; 44; 29 ಯುಪಿಎಚ್‌ಸಿಗಳಿವೆ; 15 ಯುಪಿಎಚ್‌ಸಿಗಳ ಪ್ರಸ್ತಾವ ಸಿದ್ಧ

ಪೂರ್ವ

ತೃತೀಯ ಹಂತ; 2; ಒಂದು ಆಸ್ಪತ್ರೆ ಇದೆ, ಒಂದನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ

ದ್ವಿತೀಯ ಹಂತ; 6; ಎರಡು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ, 2 ಆಸ್ಪತ್ರೆಗಳು ನಿರ್ಮಾಣ ಹಂತದಲ್ಲಿದೆ, 2 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ

ಪ್ರಾಥಮಿಕ ಹಂತ; 43; 27 ಯುಪಿಎಚ್‌ಸಿಗಳಿವೆ; 16 ಯುಪಿಎಚ್‌ಸಿಗಳ ಪ್ರಸ್ತಾವ ಸಿದ್ಧ

ಮಹದೇವಪುರ

ತೃತೀಯ ಹಂತ; 0; ಒಂದು ಆಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿಲ್ಲ

ದ್ವಿತೀಯ ಹಂತ; 2; ಒಂದು ಕಾರ್ಯನಿರ್ವಹಿಸುತ್ತಿದೆ; ಇನ್ನೊಂದಕ್ಕೆ ಜಾಗ ಗುರುತಿಸಲಾಗಿದೆ

ಪ್ರಾಥಮಿಕ ಹಂತ; 17; 16 ಯುಪಿಎಚ್‌ಸಿಗಳಿವೆ; 1 ಯುಪಿಎಚ್‌ಸಿಗಳ ಪ್ರಸ್ತಾವ ಸಿದ್ಧ

ಆರ್‌.ಆರ್‌.ನಗರ

ತೃತೀಯ ಹಂತ; 1; ಒಂದು ಆಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿಲ್ಲ, ಒಂದು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ

ದ್ವಿತೀಯ ಹಂತ; 2; ಒಂದೂ ಕಾರ್ಯನಿರ್ವಹಿಸುತ್ತಿಲ್ಲ; ಒಂದು ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ, ಇನ್ನೊಂದಕ್ಕೆ ಜಾಗ ಗುರುತಿಸಲಾಗಿದೆ

ಪ್ರಾಥಮಿಕ ಹಂತ; 16; 13 ಯುಪಿಎಚ್‌ಸಿಗಳಿವೆ; 3 ಯುಪಿಎಚ್‌ಸಿಗಳ ಪ್ರಸ್ತಾವ ಸಿದ್ಧ

ದಕ್ಷಿಣ

ತೃತೀಯ ಹಂತ; 0; ಒಂದು ಆಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿಲ್ಲ

ದ್ವಿತೀಯ ಹಂತ; 6; 1 ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. 2 ಆಸ್ಪತ್ರೆಗಳು ನಿರ್ಮಾಣ ಹಂತದಲ್ಲಿವೆ, ಇನ್ನೊಂದಕ್ಕೆ ಜಾಗ ಗುರುತಿಸಲಾಗಿದೆ, ಎರಡು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ

ಪ್ರಾಥಮಿಕ ಹಂತ; 15; 13 ಯುಪಿಎಚ್‌ಸಿಗಳಿವೆ; 2 ಯುಪಿಎಚ್‌ಸಿಗಳ ಪ್ರಸ್ತಾವ ಸಿದ್ಧ

ಪಶ್ಚಿಮ

ತೃತೀಯ ಹಂತ; 2; ಒಂದು ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದಕ್ಕೆ ಜಾಗ ಗುರುತಿಸಲಾಗಿದೆ

ದ್ವಿತೀಯ ಹಂತ; 6; 2 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ. 2 ಆಸ್ಪತ್ರೆಗಳು ನಿರ್ಮಾಣ ಹಂತದಲ್ಲಿವೆ, ಇನ್ನೊಂದಕ್ಕೆ ಜಾಗ ಗುರುತಿಸಲಾಗಿದೆ, ಒಂದು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ

ಪ್ರಾಥಮಿಕ ಹಂತ; 11; 10 ಯುಪಿಎಚ್‌ಸಿಗಳಿವೆ; 1 ಯುಪಿಎಚ್‌ಸಿಯ ಪ್ರಸ್ತಾವ ಸಿದ್ಧ

ಯಲಹಂಕ

ತೃತೀಯ ಹಂತ; 0; ಒಂದು ಆಸ್ಪತ್ರೆಯೂ ಕಾರ್ಯನಿರ್ವಹಿಸುತ್ತಿಲ್ಲ

ದ್ವಿತೀಯ ಹಂತ; 2; 1 ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. 1 ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ

ಪ್ರಾಥಮಿಕ ಹಂತ; 8; 6 ಯುಪಿಎಚ್‌ಸಿಗಳಿವೆ; 2 ಯುಪಿಎಚ್‌ಸಿಗಳ ಪ್ರಸ್ತಾವ ಸಿದ್ಧ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು