ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ವಕೀಲರಿಗೆ ಹೈಕೋರ್ಟ್‌ ಜಾಮೀನು

ಸ್ನೇಹಿತನ ಹತ್ಯೆ ಆರೋಪ ಪ್ರಕರಣ
Last Updated 1 ಜುಲೈ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ ಮತ್ತು ವಕೀಲರೊಬ್ಬರ ಮಧ್ಯೆ ನಡೆದ ಹಲ್ಲೆ–ಪ್ರತಿಹಲ್ಲೆ
ಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿದ್ದ ವಕೀಲರಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಈ ಕುರಿತಂತೆ ನಗರದ ವಕೀಲ ಎಲ್.ಮಹೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ಪವನಚಂದ್ರ ಶೆಟ್ಟಿ, ‘ಕಾನೂನಿನ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಆತ್ಮರಕ್ಷಣೆಯ ಹಕ್ಕಿದೆ ಎಂಬುದನ್ನು 1971ರ ವಿದ್ಯಾಸಿಂಗ್ ಪ್ರಕರಣದ ತೀರ್ಪಿನಲ್ಲಿ ವ್ಯಾಖ್ಯಾನಿಸಲಾಗಿದೆ. ಹೀಗಾಗಿ, ಈ ಪ್ರಕರಣದಲ್ಲೂ ಅರ್ಜಿದಾರರು ತಮ್ಮ ಆತ್ಮರಕ್ಷಣೆಗಾಗಿ ಪ್ರತಿಹಲ್ಲೆ ನಡೆಸಿದಾಗ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದ್ದರಿಂದ, ಇದು
ಉದ್ದೇಶಪೂರ್ವಕ ಕೊಲೆ ಅಲ್ಲವಾದ್ದರಿಂದ ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು. ವಾದ ವನ್ನು ಮಾನ್ಯ ಮಾಡಿದ ನ್ಯಾಯಪೀಠ ಮಹೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಪ್ರಕರಣವೇನು?: ಮಹೇಂದ್ರ ತಮ್ಮ ಪತ್ನಿ ಮತ್ತು ಎರಡು ವರ್ಷದ ಮಗನ ಜೊತೆ ಹಳೆ ಚಂದಾಪುರದ ಜೆಪಿಆರ್‌ ಲೇಔಟ್‌ನಲ್ಲಿ 2019ರಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಬಾಡಿಗೆಗೆ ಇದ್ದ ಮನೆಯ ಮಾಲೀಕನ ಮಗ ಸಂತೋಷ್ ಕುಮಾರ್ ಮಹೇಂದ್ರ ಅವರ ಪತ್ನಿಯ ಜೊತೆ ಸಲುಗೆ ಬೆಳೆಸಿದ್ದ. ಇದರಿಂದ ಬೇಸತ್ತ ಮಹೇಂದ್ರ ಮನೆಯನ್ನು ಬೇರೆಡೆಗೆ
ವರ್ಗಾಯಿಸಿದ್ದರು.

ಈ ಮಧ್ಯೆ ಫ್ರಾನ್ಸ್‌ಗೆ ವ್ಯಾಸಂಗಕ್ಕಾಗಿ ತೆರಳಿದ್ದ ಸಂತೋಷ್‌ ಕುಮಾರ್ 2022ರ ಏಪ್ರಿಲ್‌ನಲ್ಲಿ ಬೆಂಗಳೂರಿಗೆ ಮರಳಿದಾಗ ಪುನಃ ಮಹೇಂದ್ರ ಅವರ ಪತ್ನಿಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದ. ಈ ಉದ್ದೇಶದಿಂದ ತನ್ನ ಸ್ನೇಹಿತ ಅರುಣ್‌ ಎಂಬ ಮತ್ತೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ 2022ರ ಏಪ್ರಿಲ್‌ 13ರಂದು ಮದೀನಾ ಮಸೀದಿ ಬಳಿ ವಾಸವಿದ್ದ ಮಹೇಂದ್ರ ಅವರ ಮನೆಗೆ ಬೆಳಗ್ಗೆಯೇ ಹೋಗಿದ್ದಾಗ ಮೂವರ ನಡುವೆ ಪರಸ್ಪರ ಮಾತಿನ ಚಕಮಕಿ, ಹಲ್ಲೆ–ಪ್ರತಿಹಲ್ಲೆ ನಡೆದಿತ್ತು. ಈ ವೇಳೆ, ‘ಮಹೇಂದ್ರ ನನಗೆ ಚಾಕುವಿನಿಂದ ತಿವಿದಿದ್ದರು’ ಎಂದು ಅರುಣ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ತೀವ್ರ ಗಾಯಗೊಂಡ ಅರುಣ್‌ ಕ್ಯಾಂಬೆಲ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಸಾವನ್ನಪ್ಪಿದ್ದರು. ಈ ಸಂಬಂಧ ಪೊಲೀಸರು ಐಪಿಸಿಯ ಕಲಂ 448, 307 (ಕೊಲೆ ಯತ್ನ), 354 ಜೊತೆಗೆ 34ರ ಅಡಿಯಲ್ಲಿ ಹಾಗೂ ಬಾಲನ್ಯಾಯ ಕಾಯ್ದೆ–2015ರ ಕಲಂ 75ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT