ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆದಾಯ ಶೇ 25ರಷ್ಟು ಕುಸಿತದ ಭೀತಿ

ಕೃಷಿಗೆ ಪ್ರತಿಕೂಲವಾಗಲಿರುವ ಹವಾಮಾನ ಬದಲಾವಣೆ: ಆರ್ಥಿಕ ಸಮೀಕ್ಷೆ ಕಳವಳ
Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಗಣನೀಯ ಪ್ರಮಾಣದ ಜನರು ಅವಲಂಬಿತರಾಗಿರುವ ಕೃಷಿ ಕ್ಷೇತ್ರದ ಮೇಲೆ ಹವಾಮಾನ ಬದಲಾವಣೆ ಭಾರಿ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಇದರಿಂದಾಗಿ ರೈತರ ಆದಾಯವು ಮಧ್ಯಮಾವಧಿಯಲ್ಲಿ ಶೇ 20ರಿಂದ 25ರಷ್ಟು ಇಳಿಕೆಯಾಗಲಿದೆ ಎಂದು 2018–19ರ ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ.

ಈ ಪರಿಣಾಮವನ್ನು ಮೆಟ್ಟಿ ನಿಲ್ಲಲು ನೀರಾವರಿಯಲ್ಲಿ ತೀವ್ರ ಪ್ರಮಾಣದ ಬದಲಾವಣೆ ಅಗತ್ಯ ಇದೆ. ಜತೆಗೆ, ಹೊಸ ತಂತ್ರಜ್ಞಾನಗಳ ಬಳಕೆ, ಇಂಧನ ಬಳಕೆಯಲ್ಲಿ ವಿವೇಕ ಅಗತ್ಯ. ಹಾಗೆಯೇ ರಸಗೊಬ್ಬರ ಸಹಾಯಧನದತ್ತ ಗಮನ ಹರಿಸಬೇಕಿದೆ.

ಬೇಸಾಯವು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಹಾಗೆಯೇ, ಇದು ಸಾಕಷ್ಟು ರಾಜಕೀಯ ಬೆರೆತ ವಿಚಾರ. ಹಾಗಾಗಿ, ಕೃಷಿ ಕ್ಷೇತ್ರದ ಸುಧಾರಣೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಜಿಎಸ್‌ಟಿ ಮಂಡಳಿಯ ರೀತಿಯ ಸುಧಾರಣಾ ಕ್ರಮವೊಂದರ ಅಗತ್ಯ ಇದೆ.

ಹವಾಮಾನ ಬದಲಾವಣೆಯ ಪರಿಣಾಮಗಳು ಕೃಷಿ ವಲಯದಲ್ಲಿ ಈಗಾಗಲೇ ಕಾಣಿಸುತ್ತಿದೆ. ವಾರ್ಷಿಕ ಆದಾಯದಲ್ಲಿ ಸರಾಸರಿ ಕುಸಿತವು ಶೇ 15ರಿಂದ 18ರಷ್ಟಿರಬಹುದು. ನೀರಾವರಿ ಇಲ್ಲದ ಪ್ರದೇಶದಲ್ಲಿ ಇದು ಶೇ 20–25ರವರೆಗೂ ಹೋಗಬಹುದು.

ನೀರಾವರಿ ಕೊರತೆ: ನೀರಾವರಿ ಪ್ರದೇಶವನ್ನು ವ್ಯಾಪಕವಾಗಿ ಹೆಚ್ಚಿಸಬೇಕಿದೆ. ಆದರೆ, ನೀರಿನ ಕೊರತೆ ಹೆಚ್ಚುತ್ತಲೇ ಇದೆ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಹಾಗಾಗಿ ಇದು ದೊಡ್ಡ ಸವಾಲಾಗಿದೆ.

ಈಗ, ದೇಶದಲ್ಲಿ ನೀರಾವರಿ ಹೊಂದಿರುವ ಕೃಷಿ ಜಮೀನಿನ ಪ್ರಮಾಣ ಶೇ 45ರಷ್ಟು ಮಾತ್ರ. ಗಂಗಾ ಬಯಲು ಪ್ರದೇಶ ಮತ್ತು ಗುಜರಾತ್‌ ಹಾಗೂ ಮಧ್ಯಪ್ರದೇಶದ ಹೆಚ್ಚಿನ ಭಾಗಗಳಲ್ಲಿ ನೀರಾವರಿ ಇದೆ. ಆದರೆ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸಗಡ ಹಾಗೂ ಜಾರ್ಖಂಡ್‌ನ ವಿಸ್ತಾರ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯ ಇಲ್ಲ. ಹಾಗಾಗಿ ಈ ‍ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ತೀವ್ರವಾಗಿ ಕಾಡಲಿದೆ.

ವಿದ್ಯುತ್‌ ಸಹಾಯಧನದಲ್ಲಿ ಬದಲಾವಣೆ: ವಿದ್ಯುತ್‌ ಸಹಾಯಧನದ ಹಣವನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಬೇಕಿದೆ. ಇದರಿಂದಾಗಿ ರೈತರು ಬಳಸುವ ವಿದ್ಯುತ್‌ನ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಜಾರಿಯಾದರೆ, ನೀರಿನ ಉಳಿತಾಯ ಸಾಧ್ಯವಾಗಬಹುದು.

ಬೆಳೆ ವಿಮೆಗೆ ಹೊಸರೂಪ: ಹವಾಮಾನ ಬದಲಾವಣೆಯು ಬೇಸಾಯದ ಅಸ್ಥಿರತೆಯನ್ನು ಹೆಚ್ಚಿಸಲಿದೆ. ಹಾಗಾಗಿ ಬೆಳೆಗೆ ಹೆಚ್ಚು ಪರಿಣಾಮಕಾರಿ ವಿಮೆ ವ್ಯವಸ್ಥೆ ಬೇಕು. ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ಉತ್ಸಾಹದಿಂದ ಬಳಸಬೇಕಿದೆ.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಬಲಪಡಿಸಬೇಕು. ರೈತರ ನಷ್ಟವನ್ನು ಅಂದಾಜಿಸಲು ಹವಾಮಾನ ಆಧರಿತ ಮಾದರಿಗಳು ಮತ್ತು ಡ್ರೋನ್‌ ತಂತ್ರಜ್ಞಾನ ಬಳಸಬೇಕು. ರೈತರಿಗೆ ವಾರದೊಳಗೆ ಪರಿಹಾರ ದೊರೆಯಬೇಕು.

***

ಚಿಲ್ಲರೆ ಹಣದುಬ್ಬರ 6 ವರ್ಷದ ಕನಿಷ್ಠ

ನವದೆಹಲಿ (ಪಿಟಿಐ): 2017–18ನೇ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಸರಾಸರಿ ಶೇ 3.3ಕ್ಕೆ ಇಳಿದಿದೆ. ಇದು ಆರು ವರ್ಷಗಳಲ್ಲಿಯೇ ಕನಿಷ್ಠ ಮಟ್ಟ. ಇಂಧನ ಮತ್ತು ವಿದ್ಯುತ್‌ ಬಿಟ್ಟು ಉಳಿದೆಲ್ಲಾ ಪದಾರ್ಥಗಳ ಬೆಲೆ ಸ್ಥಿರತೆಯೆಡೆಗೆ ಮರಳುತ್ತಿದೆ. ದೇಶದ ಆರ್ಥಿಕತೆ ನಿಧಾನವಾಗಿ ಪರಿವರ್ತನೆಗೆ ಒಳಗಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಹಣದುಬ್ಬರ ದರ ಹೆಚ್ಚು ಸ್ಥಿರವಾಗಿದೆ.

‘ಹಣದುಬ್ಬರವನ್ನು ನಿಯಂತ್ರಿಸುವುದು ಸರ್ಕಾರದ ಆದ್ಯತೆಗಳಲ್ಲೊಂದು. 2017–18ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರ ಇಳಿಮುಖವಾಗಿಯೇ ಇತ್ತು. ಸತತ ನಾಲ್ಕನೇ ವರ್ಷದಲ್ಲಿಯೂ ಚಿಲ್ಲರೆ ಹಣದುಬ್ಬರ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದೆ’ ಎಂದು ಸಮೀಕ್ಷೆ ತಿಳಿಸಿದೆ.

ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಹಣದುಬ್ಬರ ಇಳಿಮುಖವಾಗಿತ್ತು. ಕೃಷಿ ಉತ್ಪಾದನೆ ಉತ್ತಮವಾಗಿದ್ದರಿಂದ ಆಹಾರ ಹಣದುಬ್ಬರ ಶೇ (–) 2.1 ರಿಂದ ಶೇ 1.5ರ ಮಟ್ಟದಲ್ಲಿತ್ತು. ಸರ್ಕಾರ ತೆಗೆದುಕೊಂಡ ಹಲವು ಕ್ರಮಗಳಿಂದಾಗಿಯೂ ಬೆಲೆ ನಿಯಂತ್ರಣಕ್ಕೆ ಬಂದಿದೆ. ಹಣ್ಣು , ತರಕಾರಿಗಳು ತುಟ್ಟಿಯಾಗಿದ್ದರಿಂದ ಕೆಲವು ತಿಂಗಳಿನಲ್ಲಿ ಆಹಾರ ಹಣದುಬ್ಬರ ಏರಿಕೆ ಕಂಡಿದೆಯಷ್ಟೆ. ಒಟ್ಟಾರೆ ಹಣದುಬ್ಬರ ಸ್ಥಿರವಾಗಿಯೇ ಇದೆ.

2017–18ರಲ್ಲಿ ರಾಜ್ಯವಾರು ಚಿಲ್ಲರೆ ಹಣದುಬ್ಬರವನ್ನು ಗಮನಿಸಿದರೆ ಕಡಿಮೆ ಮಟ್ಟದಲ್ಲಿಯೇ ಇದೆ. 17 ರಾಜ್ಯಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ 4ಕ್ಕಿಂತಲೂ ಕಡಿಮೆ ಮಟ್ಟದಲ್ಲಿದೆ.

***

ಪರೋಕ್ಷ ತೆರಿಗೆದಾರರ ಪ್ರಮಾಣ ಶೇ 50 ಹೆಚ್ಚಳ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಪರೋಕ್ಷ ತೆರಿಗೆ ಪಾವತಿಸುವವರ ಪ್ರಮಾಣ ಶೇ 50 ಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ. ಒಟ್ಟು 34 ಲಕ್ಷ ಉದ್ಯಮಗಳು ತೆರಿಗೆ ವ್ಯಾಪ್ತಿಗೆ ಬಂದಿವೆ.

ಜಿಎಸ್‌ಟಿ ವ್ಯವಸ್ಥೆ ಬಂದ ಬಳಿಕ ಸ್ವಯಂಪ್ರೇರಿತರಾಗಿ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮುಖ್ಯವಾಗಿ ಸಣ್ಣ ಪ್ರಮಾಣದಲ್ಲಿ ಉದ್ಯಮ ನಡೆಸುವವರು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಲಾಭ ಪಡೆಯಲು ಜಿಎಸ್‌ಟಿಗೆ ನೋಂದಣಿ ಆಗಿದ್ದಾರೆ.

ವ್ಯವಸ್ಥೆಯು ಸ್ಥಿರತೆಯ ಹಾದಿಗೆ ಬರುತ್ತಿದ್ದಂತೆಯೇ ತೆರಿಗೆ ಸಂಗ್ರಹದ ಬಗ್ಗೆ ಮೂಡಿರುವ ಗೊಂದಲ ಮತ್ತು ಆತಂಕ ಕಡಿಮೆಯಾಗಲಿದೆ.

ಸದ್ಯದ ಮಟ್ಟಿಗೆ ವರಮಾನ ಸಂಗ್ರಹ ಉತ್ತಮವಾಗಿಯೇ ಇದೆ. ತೆರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಜಾರಿಗೆ ತರಲಾಗಿದೆ. ಹಾಗಿದ್ದರೂ ತೆರಿಗೆ ಸಂಗ್ರಹ ಸ್ಥಿರತೆಯೆಡೆಗೆ ಬಂದು ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT