‘ದುಡ್ಡು ಕೊಡದಿದ್ರೆ ಅಧಿಕಾರಿಗಳು ಕೆಲಸ ಮಾಡೋದಿಲ್ಲ’

7
ಕುಣಿಗಲ್‌ ಎ.ಸಿ, ತಹಶೀಲ್ದಾರ್ ಖುದ್ದು ಹಾಜರಿಗೆ ಆದೇಶ

‘ದುಡ್ಡು ಕೊಡದಿದ್ರೆ ಅಧಿಕಾರಿಗಳು ಕೆಲಸ ಮಾಡೋದಿಲ್ಲ’

Published:
Updated:

 ಬೆಂಗಳೂರು: ‘ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಮಾಡಬೇಕಾದ ಕೆಲಸಕ್ಕೆ ಜನರಿಂದ ಹಣವನ್ನು ಅಪೇಕ್ಷಿಸುತ್ತಾರೆ ಎಂಬ ಭಾವನೆ ದೇಶದಾದ್ಯಂತ ಇದೆ. ಇಂತಹ ಭಾವನೆ ಬೆಳೆಯಲು ಅಧಿಕಾರಿಶಾಹಿಯ ಕಾರ್ಯ ವೈಖರಿಯೇ ಕಾರಣ’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕುಣಿಗಲ್ ತಾಲ್ಲೂಕಿನಲ್ಲಿ ಟಿ.ಮರಿಗೌಡ ಸೇರಿದಂತೆ ಮೂವರಿಗೆ ಸೇರಿದ ಜಮೀನಿನ ಸರ್ವೇ ನಡೆಸಿ ಅದಕ್ಕೆ ಬೇಲಿ ಹಾಕುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಕುಣಿಗಲ್ ತಹಶೀಲ್ದಾರ್ ನಾಗರಾಜ್ ಹಾಗೂ ಭೂ ದಾಖಲಾತಿ ಹಾಗೂ ಸರ್ವೇ ಸೆಟ್ಲ್‌ಮೆಂಟ್ ವಿಭಾಗದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.

ಈ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್‌.ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ‘ಕುಣಿಗಲ್ ಉಪವಿಭಾಗಾಧಿಕಾರಿ ಶಿವಕುಮಾರ್ ಸಮ್ಮುಖದಲ್ಲಿ ಅರ್ಜಿದಾರರ ಜಮೀನಿನ ಸರ್ವೇ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೆ, ಉಪ ವಿಭಾಗಾಧಿಕಾರಿ ಕೋರ್ಟ್‌ ಆದೇಶವನ್ನು ಪಾಲಿಸಿಲ್ಲ. ತಹಶೀಲ್ದಾರ್ ನಾಗರಾಜ್, ಜಮೀನನ್ನು ಅನಂತಾಶ್ರಮ ಮಠಕ್ಕೆ ಮಾರಾಟ ಮಾಡಲು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ನ್ಯಾಯ
ಪೀಠಕ್ಕೆ ದೂರಿದರು. 

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಚೌಹಾಣ್‌, ‘ಜಮೀನನ್ನು ಮಠಕ್ಕೆ ಮಾರಾಟ ಮಾಡಲು ತಹಸೀಲ್ದಾರ್ ಏಕೆ ಒತ್ತಡ ಹೇರುತ್ತಾರೆ’ ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿದರು.

‘ತಹಸೀಲ್ದಾರ್ ತಮ್ಮ ಕರ್ತವ್ಯ ನಿರ್ವಹಿಸದೇ ಇರುವುದಕ್ಕೆ ಕಾರಣ ಬಹುಶಃ ಅವರು ಮಠದ ಜೊತೆಗೆ ಕೈ ಜೋಡಿಸಿರಬೇಕು, ಕರ್ತವ್ಯ ಲೋಪ ಎಸಗಿರಬೇಕು ಇಲ್ಲವೇ, ತಹಶೀಲ್ದಾರ್‌ಗೆ ಅರ್ಜಿದಾರರು ಹಣ ನೀಡಿರಲಿಕ್ಕಿಲ್ಲ. ಅಧಿಕಾರಿಗಳು ಜನರ ಕೆಲಸ ಮಾಡಬೇಕೆಂದರೆ ಹಣ ನೀಡಬೇಕು ಇಲ್ಲವೇ ಪ್ರಭಾವ ಬಳಸಿ ಒತ್ತಡ ಹೇರಬೇಕು ಎಂಬ ಭಾವನೆ ಇಡೀ ದೇಶದಲ್ಲಿ ಇದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಹೈಕೋರ್ಟ್ ಆದೇಶವನ್ನು ಏಕೆ ಪಾಲಿಸಿಲ್ಲ’ ಎಂಬ ಬಗ್ಗೆ ವಿವರಣೆ ನೀಡಲು ಕುಣಿಗಲ್ ಉಪ ವಿಭಾಗಾಧಿಕಾರಿ ಶಿವಕುಮಾರ್ ಮತ್ತು ತಹಶೀಲ್ದಾರ್ ನಾಗರಾಜ್ ಇದೇ 26 ರಂದು ಕೋರ್ಟ್‌ಗೆ ಖುದ್ದು ಹಾಜರಾಗಬೇಕು’ ಎಂದು ನಿರ್ದೇಶಿಸಿದ ನ್ಯಾಯಮರ್ತಿಗಳು ವಿಚಾರಣೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !