ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಒತ್ತುವರಿ ಪರಿಶೀಲನೆ ವೇಳೆ ಸಿಟ್ಟಾದ

ಅಹವಾಲು ಹೇಳಲು ಬಂದ ಮಹಿಳೆಗೆ ನಿಂದನೆ: ಶಾಸಕ ಲಿಂಬಾವಳಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಹವಾಲು ಹೇಳಿ ಕೊಳ್ಳಲು ಬಂದ ಮಹಿಳೆಯನ್ನು ಶಾಸಕ ಅರವಿಂದ ಲಿಂಬಾವಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಸೋಮವಾರ ಸುರಿದ ಮಳೆಯಿಂದಾಗಿ ಮಹದೇವಪುರದ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಉಂಟಾಗಿ ಸಮಸ್ಯೆ ಎದುರಾಗಿದೆ. ಗುರುವಾರ ಮಧ್ಯಾಹ್ನ ನಲ್ಲೂರಹಳ್ಳಿಯ ವೈಟ್‌ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಕಟ್ಟಡದ ಕೆಲ ಭಾಗವನ್ನು ಜೆಸಿಬಿಯಿಂದ ತೆರವು
ಗೊಳಿಸುವ ವೇಳೆ ಸ್ಪಷ್ಟನೆ ನೀಡಲು ಮುಂದಾದ ರುತ್ ಸಗಾಯಿ ಮೇರಿ ಅಮೀಲಾ ಎಂಬ ಮಹಿಳೆ, ದಾಖಲೆ ಪತ್ರಗಳನ್ನು ತೋರಿಸಿ ಶಾಸಕರ ಬಳಿ ಅಳಲು ತೋಡಿಕೊಳ್ಳಲು ಮುಂದಾದರು. ಮಹಿಳೆ ಕೈಯಿಂದ ದಾಖಲೆ ಕಿತ್ತುಕೊಳ್ಳಲು ಶಾಸಕರು ಯತ್ನಿಸಿದರು. ಪತ್ರಗಳನ್ನು ಕೊಡಲು ನಿರಾಕರಿಸಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಏಕ ವಚನದಲ್ಲೇ ನಿಂದಿಸಿದರು.

‘ಒತ್ತುವರಿ ಮಾಡಿಕೊಂಡು ನನಗೆ ನ್ಯಾಯ ಕೇಳಲು ಬರುತ್ತಿಯಾ, ಮಾನ ಮರ್ಯಾದೆ ಇಲ್ವ ನಿನಗೆ, ನನಗೂ ಬೇರೆ ಭಾಷೆ ಬರುತ್ತೆ. ಇವಳಿಗೆ ಮರ್ಯಾದೆ ಬೇರೆ ಕೇಡು, ಒದ್ದು ಒಳಗೆ ಹಾಕಿ’ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದರು.

‘ಮರ್ಯಾದೆಯಿಂದ ಮಾತನಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು‌ ನನಗೂ ಎಂಎಲ್ಎ. ಎಲ್ಲರಿಗೂ ಶಾಸಕರೇ’ ಎಂದು ಮಹಿಳೆ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ದೂರು ದಾಖಲಿಸದ ಪೊಲೀಸರು
ಘಟನೆ ಬಳಿಕ ವೈಟ್‌ಫೀಲ್ಡ್‌ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆದೊಯ್ದ ಪೊಲೀಸರು, ಸಂಜೆ ತನಕ ಅಲ್ಲೇ ಕೂರಿಸಿದ್ದರು. ರಾತ್ರಿ 7.30ರ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆಗೆ ಮುಂದಾದರು. ಬಳಿಕ ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ಮನೆಗೆ ಕಳುಹಿಸಿದರು.

‘ನಾವು ರಾಜಕಾಲುವೆ ಒತ್ತುವರಿ ಮಾಡದೆ ವಾಣಿಜ್ಯ ಕಟ್ಟಡ ನಿರ್ಮಿಸಿದ್ದೇವೆ. ಕಾನೂನು ಪ್ರಕಾರ ಯೋಜನಾ ನಕ್ಷೆಗೆ ಬಿಬಿಎಂಪಿಯಿಂದ ಅನುಮೋದನೆ ಪಡೆದಿದ್ದೇವೆ. ನಕ್ಷೆ ಸೇರಿ ಇತರ ದಾಖಲೆ ತೋರಿಸಿ ಅಹವಾಲು ಹೇಳಿಕೊಳ್ಳಲು ಮುಂದಾದಾಗ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಮ್ಮ ಕಟ್ಟಡದ ಭಾಗದಲ್ಲಿ ಶೌಚಾಲಯ, ವಿದ್ಯುತ್ ಪರಿವರ್ತಕ ಇರುವುದರಿಂದ ಕಟ್ಟಡ ಒಡೆಯಬೇಡಿ, ಸಮಯ ಕೊಡಿ ಎಂದು ಮನವಿ ಮಾಡಿಕೊಂಡೆ. ಆದರೂ ಶಾಸಕರು ಏಕ ವಚನದಲ್ಲೇ ನಿಂದಿಸಿ ಹಲ್ಲೆ ಮಾಡಲು ಮುಂದಾದರು. ನನ್ನ ಕೈಯಿಂದ ದಾಖಲೆ ಕಸಿದುಕೊಂಡು ನೆಲಕ್ಕೆ ಎಸೆದರು. ಪೊಲೀಸರು ದೂರು ದಾಖಲಿಸಿಕೊಳ್ಳದೆ ಮನೆಗೆ ಕಳುಹಿಸಿದ್ದಾರೆ. ಶಾಸಕರ ದಬ್ಬಾಳಿಕೆ ಮಿತಿ ಮೀರಿದೆ’ ಎಂದು ರುತ್ ಸಗಾಯಿ ಮೇರಿ ಅಮೀಲಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು