ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳೆಗೇರಿ ಅಭಿವೃದ್ಧಿ ಮಂಡಳಿ: ನಿವೃತ್ತಿಯಂಚಿನ ಸಿ.ಇಗೆ ‘ಗುತ್ತಿಗೆ’ ಕೊಡುಗೆ?

Published : 5 ಆಗಸ್ಟ್ 2024, 0:41 IST
Last Updated : 5 ಆಗಸ್ಟ್ 2024, 0:41 IST
ಫಾಲೋ ಮಾಡಿ
Comments

ಬೆಂಗಳೂರು: ಇದೇ 31ಕ್ಕೆ ವಯೋನಿವೃತ್ತಿ ಹೊಂದಲಿರುವ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಎಂಜಿನಿಯರ್‌ ಎನ್‌.ಪಿ. ಬಾಲರಾಜು ಅವರನ್ನು ಎರಡು ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿಸಲು ವಸತಿ ಸಚಿವರು ಮುಂದಾಗಿದ್ದಾರೆ.

ವಿವಿಧ ಇಲಾಖೆಗಳಲ್ಲಿ ನಿವೃತ್ತಿ ಬಳಿಕವೂ ಗುತ್ತಿಗೆ ಆಧಾರದಲ್ಲಿ ಮುಂದುವರಿದಿರುವ ಅಧಿಕಾರಿಗಳನ್ನು ಹೊರ ಕಳುಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆದೇಶಿಸಿದ್ದರು. ಆ ಬಳಿಕ ಕೆಲವರನ್ನು ಕೆಲಸದಿಂದ ಬಿಡುಗಡೆ ಗೊಳಿಸಲಾಗಿತ್ತು. ಮುಖ್ಯಮಂತ್ರಿ ಯವರ ನಿರ್ದೇಶನಕ್ಕೆ ವಿರುದ್ಧವಾಗಿ ಬಾಲರಾಜು ಅವರನ್ನು ಕೆಲಸದಲ್ಲಿ ಮುಂದುವರಿಸಲು ವಸತಿ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ.

ವಸತಿ ಸಚಿವರಿಂದ ಟಿಪ್ಪಣಿ: ಜುಲೈ 29ರಂದು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಟಿಪ್ಪಣಿ ಹೊರಡಿಸಿರುವ ವಸತಿ ಸಚಿವ ಬಿ.ಜೆಡ್‌. ಜಮೀರ್ ಅಹ್ಮದ್ ಖಾನ್‌, ‘ಬಾಲರಾಜು ಅವರು ಕೊಳೆಗೇರಿ ಅಭಿವೃದ್ಧಿ ಮಂಡಳಿ ಮುಖ್ಯ ಎಂಜಿನಿಯರ್‌ ಹುದ್ದೆಯಿಂದ ಆಗಸ್ಟ್‌ 31ರಂದು ವಯೋನಿವೃತ್ತಿ ಹೊಂದುತ್ತಿದ್ದಾರೆ. ಅವರನ್ನು ಸೆಪ್ಟೆಂಬರ್‌ 1 ರಿಂದ ಎರಡು ವರ್ಷಗಳಿಗೆ ಅದೇ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಕ್ರಮ ವಹಿಸಿ’ ಎಂದು ಸೂಚನೆ ನೀಡಿದ್ದಾರೆ.

‘ಬಾಲರಾಜು 35 ವರ್ಷ ಮಂಡಳಿಯಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಗತಿಯಲ್ಲಿರುವ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಇವರ ಸೇವೆ ಅವಶ್ಯಕ’ ಎಂದೂ ಉಲ್ಲೇಖಿಸಿದ್ದಾರೆ.

ಹೆಚ್ಚುವರಿ ಹೊಣೆ: ವಸತಿ ಇಲಾಖೆಯ ಅಧೀನದಲ್ಲಿರುವ ರಾಜೀವ್‌ ಗಾಂಧಿ ವಸತಿ ನಿಗಮದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದ ಸಂಜೀವ ವಿ. ಮರೆಡ್ಡಿ ರಜೆಯ ಮೇಲೆ ತೆರಳಿದ್ದು, ಈ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಬಾಲರಾಜು ಅವರಿಗೆ ವಹಿಸಿ ಜುಲೈ 30ರಂದು ಆದೇಶ ಹೊರಡಿಸಲಾಗಿದೆ.

ರಾಜೀವ ಗಾಂಧಿ ವಸತಿ ನಿಗಮವು ಗ್ರಾಮೀಣ ವಸತಿ ಯೋಜನೆಗಳ ಜೊತೆ ಯಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳ ವಸತಿ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊಂದಿದೆ.

ಖಾಲಿ ಉಳಿದ ಸಿ.ಇಗಳು: ಕೊಳೆಗೇರಿ ಅಭಿವೃದ್ಧಿ ಮಂಡಳಿ ಮುಖ್ಯ ಎಂಜಿನಿಯರ್‌ ಸೇರಿದಂತೆ ವಿವಿಧ ಇಲಾಖೆಗಳ ತಾಂತ್ರಿಕ ಹುದ್ದೆಗಳಿಗೆ ಲೋಕೋಪಯೋಗಿ ಇಲಾಖೆ ಮೂಲದ ಮುಖ್ಯ ಎಂಜಿನಿಯರ್‌ಗಳನ್ನೇ ನೇಮಿಸ ಲಾಗುತ್ತಿತ್ತು. ಈಗ ಹಲವು ಮುಖ್ಯ ಎಂಜಿನಿಯರ್‌ಗಳು ಹುದ್ದೆ ಇಲ್ಲದೆ ಖಾಲಿ ಕುಳಿತಿದ್ದರೂ ನಿವೃತ್ತರನ್ನು ಮುಂದುವರಿಸುವ ಪ್ರಸ್ತಾವಕ್ಕೆ ಅಧಿಕಾರಿ ಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ರಮೇಂದ್ರ, ಜಿ.ಇ. ಯತೀಶ್‌ ಚಂದ್ರನ್‌, ವಿನಾಯಕ ಸೂಗೂರು, ಜಗನ್ನಾಥ ಹಲಿಂಗೆ, ಶಾಂತರಾಜಣ್ಣ ಸೇರಿದಂತೆ ಮುಖ್ಯ ಎಂಜಿನಿಯರ್‌ ದರ್ಜೆಯ ಹಲವರು ಹುದ್ದೆ ಇಲ್ಲದೆ ಖಾಲಿ ಕುಳಿತಿದ್ದಾರೆ. ಮುಖ್ಯ ಎಂಜಿನಿಯರ್‌ಗಳ ಹುದ್ದೆಗಳು ಖಾಲಿ ಇದ್ದರೂ ಅವರಿಗೆ ಹುದ್ದೆ ತೋರಿಸಿಲ್ಲ.

ಪ್ರತಿಕ್ರಿಯೆಗೆ ಸಿಗದ ಸಚಿವರು: ಈ ಕುರಿತು ವಸತಿ ಸಚಿವ ಜಮೀರ್‌ ಅಹ್ಮದ್ ಖಾನ್‌ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ಮೊಬೈಲ್‌ ಕರೆ ಸ್ವೀಕರಿಸಲಿಲ್ಲ.

ನಿವೃತ್ತರನ್ನು ಹುದ್ದೆಯಲ್ಲಿ ಮುಂದುವರಿಸುವ ನಿರ್ಧಾರವನ್ನು ನಮ್ಮ ಹಂತದಲ್ಲಿ ಕೈಗೊಳ್ಳಲಾಗುವುದಿಲ್ಲ. ಮುಖ್ಯಮಂತ್ರಿಯವರೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ
ನವೀನ್‌ ರಾಜ್‌ ಸಿಂಗ್‌, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ
ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿ
ಮುಖ್ಯ ಎಂಜಿನಿಯರ್‌ ಎನ್‌.ಪಿ. ಬಾಲರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ. 2023ರ ಅಕ್ಟೋಬರ್‌ 30ರಂದು ಬಾಲರಾಜು ಅವರ ಮನೆ ಮತ್ತು ಅವರಿಗೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT