ಶುಕ್ರವಾರ, ನವೆಂಬರ್ 15, 2019
22 °C

ವೈದ್ಯರ ವಿರುದ್ಧ ಕರವೇ ಪ್ರತಿಭಟನೆ

Published:
Updated:
Prajavani

ಬೆಂಗಳೂರು: ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ಧರಣಿ ಮುಂದುವರಿಸಿದ್ದು, ಅದರ ನಡುವೆಯೇ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಸಹ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪುರಭವನ ಎದುರು ಸೇರಿದ್ದ ಕಾರ್ಯಕರ್ತರು, ‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯ ಪ್ರಕರಣದ ಮರು ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಸ್ತ್ರಚಿಕಿತ್ಸೆಯಿಂದಾಗಿ ದೃಷ್ಟಿ ಕಳೆದುಕೊಂಡಿರುವ ರೋಗಿಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ‘ವೈದ್ಯರು ನಮ್ಮ ಜೀವನವನ್ನೇ ಅಂಧಕಾರಕ್ಕೆ ತಳ್ಳಿದ್ದಾರೆ. ನಮಗೆ ನ್ಯಾಯ ಬೇಕು’ ಎಂದು ರೋಗಿಗಳು ಆಗ್ರಹಿಸಿದರು.

‘ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿಲ್ಲ. ಕನ್ನಡ ಮಾತನಾಡದಿದ್ದದ್ದನ್ನು ಮಾತ್ರ ಪ್ರಶ್ನಿಸಿದ್ದಾರೆ. ಸುಳ್ಳು ಆರೋಪ ಮಾಡುತ್ತಿರುವ ವೈದ್ಯರು ಪ್ರತಿಭಟನೆ ಆರಂಭಿಸಿ ರೋಗಿಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.

‘ವೈದ್ಯರ ಎಡವಟ್ಟಿನಿಂದ 22 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಅವರ ಪರ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಇದು ತಪ್ಪಾ’ ಎಂದು ಪ್ರಶ್ನಿಸಿದರು.

‘ಕಾರ್ಯಕರ್ತರ ವಿರುದ್ಧ ಸುಖಾಸುಮ್ಮನೇ ದೂರು ದಾಖಲಿಸಲಾಗಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ’ ಎಂದು ಪ್ರತಿಭಟನಾಕಾರು ಹೇಳಿದರು.  

ಪ್ರತಿಕ್ರಿಯಿಸಿ (+)