ಬೆಂಗಳೂರು: ‘ಪರಿಶಿಷ್ಟ ಜಾತಿಗೆ ಕಾಟಿಕ್ ಸಮುದಾಯ ಸೇರ್ಪಡೆ ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕಟುಕ, ಕಾಟಿಕ್ ಮುಂತಾದ ಹೆಸರಿಂದ ಕರೆಯುವ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸಮುದಾಯದ ಮುಖಂಡ ಆರ್.ಕೆ.ಸಿದ್ರಾಮಣ್ಣ ನೇತೃತ್ವದ ನಿಯೋಗ ಶುಕ್ರವಾರ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ಕುರಿ, ಮೇಕೆ ಮಾಂಸ ಕಡಿಯುವುದು ಸಮಾಜದ ಕಸುಬು. ಹೀಗಾಗಿ, ಕಟುಕ ಎನ್ನುವ ಹೆಸರೂ ಸಮಾಜಕ್ಕೆ ಅಂಟಿಕೊಂಡಿದೆ. ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಗೆ ಕಾಟಿಕ್ ಸಮುದಾಯವನ್ನು ಸೇರಿಸಲಾಗಿದೆ. ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ’ ಎಂದು ಹೇಳಿದರು.
‘2012ರ ಕುಲಶಾಸ್ತ್ರೀಯ ಅಧ್ಯಯನದಲ್ಲಿಯೂ ಸಮುದಾಯದ ಸ್ಥಿತಿಗತಿಯನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಕರ್ನಾಟಕದಲ್ಲಿ ಕಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗಲೇ ಶಿಫಾರಸು ಮಾಡಲಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.